ಸ್ವಾರ್ಥ ರಾಜಕಾರಣಕ್ಕೆ ಜಗದೀಶ್ ಶೆಟ್ಟರ್ ಸ್ಪಷ್ಟ ನಿದರ್ಶನ: ಖೂಬಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸ್ವಾರ್ಥಕ್ಕಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಹೊರಟಿರುವ ಜಗದೀಶ್ ಶೆಟ್ಟರ್ ಗೆ ಲಕ್ಷಾಂತರ ಬಿಜೆಪಿ ಕಾರ್ಯಕರ್ತರ ಶಾಪ ತಟ್ಟಲಿದ್ದು, ಇದು ಮೇ 13ರಂದು ಚುನಾವಣಾ ಫಲಿತಾಂಶದಲ್ಲಿ ವ್ಯಕ್ತವಾಗಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ಬೆಂಗಳೂರಿನ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಪಕ್ಷ ಉನ್ನತ ಸ್ಥಾನ ನೀಡಿರುವುದಕ್ಕೆ ಕೇಂದ್ರ ಸಚಿವ ಸ್ಥಾನದಲ್ಲಿರುವ ತಾವೇ ನಿದರ್ಶನ. ಶೆಟ್ಟರ್ ಅವರಿಗೆ ಕಳೆದ ನಾಲ್ಕು ದಶಕಗಳಿಂದ ಪಕ್ಷದ ಕಾರ್ಯಕರ್ತರು ಸರ್ಕಾರದಲ್ಲಿ ಉನ್ನತ ಸ್ಥಾನಗಳನ್ನು ನೀಡಿದ್ದರು. ಇದೀಗ ಪಕ್ಷಕ್ಕೆ ದ್ರೋಹ ಬಗೆದು ಕಾರ್ಯಕರ್ತರನ್ನು ದೂರ ಮಾಡಿ ಬೇರೆ ಪಕ್ಷ ಸೇರಲು ಹೊರಟ್ಟಿದ್ದಾರೆ ಎಂದು ಆಕ್ಷೇಪಿಸಿದರು.

ಸ್ವಾರ್ಥ ರಾಜಕಾರಣಕ್ಕೆ ಶೆಟ್ಟರ್ ಸಾಕ್ಷಿಯಾಗಿದ್ದಾರೆ. ಬಿಜೆಪಿ, ವಿಶ್ವದಲ್ಲೇ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ. ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಕೋಟಿಗಟ್ಟಲೆ ಕಾರ್ಯಕರ್ತರು ತಮ್ಮ ಜೀವನ, ಕುಟುಂಬಗಳನ್ನು ಮರೆತು ದೇಶ ಮೊದಲು, ನಂತರ ಪಕ್ಷ, ಕೊನೆಯದಾಗಿ ತಾನು ಎಂದು ಶ್ರಮಿಸಿ ಪಕ್ಷವನ್ನು ಬಲಿಷ್ಠವಾಗಿಸಿದ್ದಾರೆ. ಶೆಟ್ಟರ್ ಸಹ ದೇಶ ಮೊದಲು ಎಂದು ರಾಜಕೀಯದಲ್ಲಿದ್ದು ಅನೇಕ ಅವಕಾಶಗಳನ್ನೂ ಪಡೆದಿದ್ದಾರೆ. ಇದೀಗ, ಯುವಕರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕ್ಷೇತ್ರ ಬಿಟ್ಟುಕೊಡುವ ವಿಚಾರ ಬಂದಾಗ ದೇಶ ಮೊದಲು ಎಂಬುದನ್ನು ಮರೆತು ಸ್ವಾರ್ಥ ತೋರಿದ್ದಾರೆ ಎಂದು ಟೀಕಿಸಿದರು.

ಲಿಂಗಾಯತರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬ ಸುದ್ದಿ ಸತ್ಯಕ್ಕೆ ದೂರ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಲಿಂಗಾಯತ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಿದೆ. ಪ್ರಬುದ್ಧತೆ ಹೊಂದಿರುವ ಲಿಂಗಾಯತ ಸಮಾಜ ಸೇರಿದಂತೆ ಎಲ್ಲ ವರ್ಗಗಳು ಬಿಜೆಪಿಯೊಂದಿಗೆ ಇವೆ. ನರೇಂದ್ರ ಮೋದಿಜಿ ಅವರ ನೇತೃತ್ವ ಮತ್ತು ಬಿಜೆಪಿ ತತ್ವ-ಸಿದ್ಧಾಂತಗಳ ಮೇಲೆ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ದೊರೆಯಲಿದ್ದು, ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಭಗವಂತ ಖೂಬಾ ಹೇಳಿದರು.

ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಮಾತನಾಡಿದರು. ಹೊಸ ಪೀಳಿಗೆಯನ್ನು ಎಲ್ಲೆಲ್ಲಿ ಮುಂದೆ ತರಲು ಸಾಧ್ಯವಿದೆಯೋ ಅಂತಹ ಕಡೆ ಯುವಕರಿಗೆ ಅವಕಾಶ ನೀಡಲಾಗಿದೆ. ನೂರು ಶೆಟ್ಟರ್ ಗಳನ್ನು ತಯಾರು ಮಾಡುವ ಶಕ್ತಿ ಬಿಜೆಪಿಗೆ ಇದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ರಾಜ್ಯ ಎಸ್.ಸಿ.ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!