Saturday, December 13, 2025

ಕೋಲ್ಕತ್ತಾದಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ: ಆಯೋಜಕರ ಬಂಧನ, ಹಣ ವಾಪಸ್​ಗೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಪ್ರವಾಸದಲ್ಲಿರುವ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಶನಿವಾರ ಬೆಳಗ್ಗೆ ಕೋಲ್ಕತ್ತಾಗೆ ಆಗಮಿಸಿದ್ದು, ಅರ್ಜೆಂಟೀನಾದ ಸೂಪರ್‌ಸ್ಟಾರ್ ನನ್ನು ಸ್ವಾಗತಿಸಲು ಚಳಿಯನ್ನು ಲೆಕ್ಕಿಸದೇ ಸಾವಿರಾರು ಫುಟ್‌ಬಾಲ್ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಕಾಯುತ್ತಿದ್ದರು. ಕೋಲ್ಕತ್ತಾ ಸಂಪೂರ್ಣ ಮೆಸ್ಸಿ ಮಯವಾಗಿತ್ತು.

ಇಂದು ಬೆಳಗ್ಗೆ 10.30ಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಅವರೊಂದಿಗೆ ಲೇಕ್‌ಟೌನ್‌ನಲ್ಲಿರುವ 70 ಅಡಿ ಎತ್ತರದ ಪ್ರತಿಮೆಯನ್ನು ಮೆಸ್ಸಿ ವರ್ಚುಯಲ್​ ಆಗಿ ಅನಾವರಣಗೊಳಿಸಿದರು. ಭದ್ರತಾ ಕಾರಣಗಳಿಂದಾಗಿ ಮೆಸ್ಸಿ ಅಲ್ಲಿಗೆ ಹೋಗಲಿಲ್ಲ. ನಂತರ, ಲಿಯೋನೆಲ್ ಮೆಸ್ಸಿ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಆಗಮಿಸಿ, ಫುಟ್‌ಬಾಲ್ ಐಕಾನ್‌ನ ಒಂದು ನೋಟಕ್ಕಾಗಿ ಬೆಳಗ್ಗೆಯಿಂದಲೇ ಕಾಯುತ್ತಿದ್ದ ಅಭಿಮಾನಿಗಳತ್ತ ಕೈ ಬೀಸಿದರು.

ಮೆಸ್ಸಿ ಬಂದು ಹೋದ ನಂತರ ಸಾಲ್ಟ್ ಲೇಕ್ ಕ್ರೀಡಾಂಗಣ ಅಕ್ಷರಶಃ ರಣರಂಗವಾಗಿತ್ತು. ಅರ್ಜೆಂಟೀನಾದ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿಯನ್ನು ನೋಡಲು ಭಾರಿ ಮೊತ್ತ ಪಾವತಿಸಿ ಟಿಕೆಟ್ ಖರೀದಿಸಿ ಬಂದಿದ್ದ ಪ್ರೇಕ್ಷಕರು, ಆಟಗಾರನನ್ನು ಮೈದಾನದಲ್ಲಿ ನೋಡಲು ಸಾಧ್ಯವಾಗದಿದ್ದಾಗ ಆಕ್ರೋಶಗೊಂಡು ಮೈದಾನಕ್ಕೆ ಏಕಾಏಕಿ ನುಗ್ಗಿ ಕುರ್ಚಿಗಳಿಂದ ಹಿಡಿದು ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಪುಡಿಮಾಡಿದ ಘಟನೆ ನಡೆದಿದೆ.

ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿನ ಈ ಅವ್ಯವಸ್ಥೆಗೆ ಕಾರಣವಾದ ಆರೋಪದ ಮೇಲೆ ಕೋಲ್ಕತ್ತಾದ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದ ಪ್ರಮುಖ ಆಯೋಜಕರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಅವರು ತಿಳಿಸಿದ್ದಾರೆ.

ನಿರಾಶೆಗೊಂಡ ಪ್ರೇಕ್ಷಕರಿಗೆ ಟಿಕೆಟ್ ಹಣವನ್ನು ಮರುಪಾವತಿಸುವಂತೆ ಆಯೋಜಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಡಿಜಿಪಿ ಹೇಳಿದ್ದಾರೆ.

error: Content is protected !!