ಹೊಸದಿಗಂತ ಡಿಜಿಟಲ್ ಡೆಸ್ಕ್ :
ವಿಜಯಪುರ ನಗರದಲ್ಲಿ ಮತ್ತೊಮ್ಮೆ ನಿನ್ನೆ ರಾತ್ರಿ (ಗುರುವಾರ) 10.45ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ಭೂಮಿ ಕಂಪಿಸಿದ ವೇಳೆ ಭಾರೀ ಶಬ್ದ ಕೇಳಿಬಂದಿದ್ದು, ಹಲವು ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ಹಲವು ಬಾರಿ ಭೂಕಂಪನವಾಗಿದ್ದರೂ ಈ ರೀತಿಯ ಶಬ್ದ ಬಂದಿರಲಿಲ್ಲ. ಆದರೆ ಈ ಬಾರಿ ಶಬ್ದ ಕೇಳಿಸಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.
ಭೂಕಂಪನವಾಗಿರುವ ಬಗ್ಗೆ ಭೂಕಂಪನ ಕೇಂದ್ರದಿಂದ ಸದ್ಯ ಯಾವುದೇ ಮಾಹಿತಿ ದೊರೆತಿಲ್ಲ. ಎರಡು ಬಾರಿ ಭೂ ಕಂಪನದ ಅನುಭವ ಜನರಿಗೆ ಆಗಿದೆ. ಕಳೆದ ಎರಡು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನವಾಗುತ್ತಲೇ ಬಂದಿದೆ.
ಈ ಕುರಿತು ಜಿಲ್ಲಾಡಳಿತದ ಮನವಿಗೆ ಭೂಕಂಪನ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದರು. ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯವಿರುವ ಕಾರಣ ಭೂಕಂಪನವಾಗುವುದು ಸಹಜ, ಇದಕ್ಕೆ ಯಾರು ಹೆದರುವ ಅವಶ್ಯಕತೆ ಇಲ್ಲವೆಂದು ಭರವಸೆ ನೀಡಿದ್ದರು. ಆದರೂ ಸಹ ಭೂಕಂಪನದ ಶಬ್ದ ಮಾತ್ರ ಕಡಿಮೆಯಾಗಿಲ್ಲ. ನಿನ್ನೆ ಸಹ ಸಂಜೆ ಮಳೆ ಸುರಿದ ಬಳಿಕ ವಿಜಯಪುರ ನಗರದ ಹಲವು ಕಡೆ ಭೂಕಂಪನ ಅನುಭವನ್ನು ಸಾರ್ವಜನಿಕರು ಅನುಭವಿಸಿದ್ದಾರೆ.