Monday, December 15, 2025

ಗೋಪಾಲನೆ ನಾಡಿನಲ್ಲಿ ಗೋಕಳ್ಳರ ಹಾವಳಿ: XUV 500ನಲ್ಲಿ ಗೋವುಗಳ ಕಳ್ಳತನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಸ್ತೆ ಬದಿ ಮಲಗಿದ್ದ ಗೋವುಗಳನ್ನು ಐಷಾರಾಮಿ ಎಸ್‌ಯುವಿ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ಗೋಕಳ್ಳರ ಗುಂಪನ್ನು ಹಿಂದು ಸಂಘಟನೆಯ ಕಾರ್ಯಕರ್ತರು ಹಿಂಬಾಲಿಸಿದ ಘಟನೆ ಕೊಪ್ಪದಲ್ಲಿ ವರದಿಯಾಗಿದೆ. ಸುಮಾರು 10 ಕಿಲೋಮೀಟರ್‌ಗಳಷ್ಟು ದೂರ ನಡೆದ ಈ ರೋಮಾಂಚಕ ಚೇಸ್ ದೃಶ್ಯವು ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶವನ್ನು ಮೂಡಿಸಿದೆ.

ಕೊಪ್ಪದಿಂದ‌ ಕುದುರೆಗುಂಡಿಯವರೆಗೆ ಸುಮಾರು 10 ಕಿ.ಮೀ ಎರಡು ಕಾರುಗಳು ರೇಸ್‌ನಂತೆ ಅತಿ ವೇಗವಾಗಿ ಸಾಗಿವೆ.. ಗೋವುಗಳನ್ನು ತುಂಬಿಕೊಂಡಿದ್ದ XUV 500 ಕಾರನ್ನು ಹಿಂದು ಸಂಘಟಕರು ಮತ್ತೊಂದು ವಾಹನದಲ್ಲಿ ಹಿಂಬಾಲಿಸಿದರು. ಈ ಇಡೀ ಚೇಸ್ ದೃಶ್ಯವನ್ನು ಕಾರ್ಯಕರ್ತರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಆದರೆ, ಕಳ್ಳರು ಅತಿ ವೇಗವಾಗಿ ವಾಹನ ಚಲಾಯಿಸಿದ್ದರಿಂದ ಅವರನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಕುದುರೆಗುಂಡಿಯವರೆಗೂ ಬೆನ್ನತ್ತಿದರೂ ವಿಫಲರಾಗಿ ಹಿಂದು ಸಂಘಟಕರು ವಾಪಸ್ ಬಂದಿದ್ದಾರೆ. ಕಳ್ಳರು ತೀರ್ಥಹಳ್ಳಿ ಮಾರ್ಗದ ಕಡೆಗೆ ಪರಾರಿಯಾಗಿರಬಹುದು ಎಂದು ಹಿಂದು ಸಂಘಟನೆಗಳು ಶಂಕೆ ವ್ಯಕ್ತಪಡಿಸಿವೆ.

ಕೊಪ್ಪ ಪಟ್ಟಣದಲ್ಲಿ ಇಂತಹ ಕಳ್ಳತನ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಿಂದೂ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ಸೋರಿಕೆಯಾದ ಘಟನೆಯ ಕುರಿತು ಪೊಲೀಸರ ವಿರುದ್ಧ ಕಿಡಿಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿರುವ ಸಂಘಟಕರು, ಗೋಕಳ್ಳರನ್ನು ಶೀಘ್ರವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಆರೋಪಿಗಳನ್ನು ಬಂಧಿಸಿ, ಪುನರಾವರ್ತನೆ ತಡೆಯಲು ಕ್ರಮ ಕೈಗೊಳ್ಳದಿದ್ದರೆ, ಠಾಣೆ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

error: Content is protected !!