Tuesday, December 16, 2025

ದೆಹಲಿಯಲ್ಲಿ ಉಸಿರಾಡೋದೇ ದೊಡ್ಡ ಸವಾಲು: 430ರ ಗಡಿ ದಾಟಿದ ವಾಯು ಗುಣಮಟ್ಟ ಸೂಚ್ಯಂಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ದೆಹಲಿಯ ವಾತಾವರಣ ಮತ್ತೆ ಅಪಾಯದ ಹಂತ ತಲುಪಿದ್ದು, ವಾಯು ಮಾಲಿನ್ಯ ಜನಜೀವನಕ್ಕೆ ತೀವ್ರ ಹೊಡೆತ ನೀಡುತ್ತಿದೆ. ಉಸಿರಾಡಲು ಕೂಡ ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳು ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ (ಜಿಆರ್‌ಎಪಿ) ಅತ್ಯಂತ ಕಠಿಣವಾದ 4ನೇ ಹಂತದ ನಿಯಮಗಳನ್ನು ಶನಿವಾರದಿಂದ ಜಾರಿಗೆ ತಂದಿದ್ದಾರೆ. ವಾಯುಗುಣಮಟ್ಟದಲ್ಲಿ ಯಾವುದೇ ಸುಧಾರಣೆಯ ಲಕ್ಷಣ ಕಾಣದ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ.

ಶನಿವಾರ ದೆಹಲಿಯ ಸರಾಸರಿ ವಾಯುಗುಣಮಟ್ಟ ಸೂಚ್ಯಂಕ 431 ಅಂಕ ತಲುಪಿದ್ದು, ಇದು ‘ಗಂಭೀರ’ ಮಟ್ಟಕ್ಕೆ ಏರಿದೆ. ನಗರದ ಹಲವೆಡೆ ದಟ್ಟ ಹೊಗೆ ಆವರಿಸಿಕೊಂಡಿದ್ದು, ಗೋಚರತೆ ಬಹಳ ಮಟ್ಟಿಗೆ ಕುಸಿದಿದೆ. ವಾಜಿರ್‌ಪುರದಲ್ಲಿ 445 ಎಕ್ಯುಐ ದಾಖಲಾಗಿದ್ದು ಅತಿ ಹೆಚ್ಚು ಮಾಲಿನ್ಯ ಕಂಡುಬಂದ ಪ್ರದೇಶವಾಗಿದೆ. ವಿವೇಕ್ ವಿಹಾರ್, ಜಹಾಂಗೀರ್‌ಪುರಿ, ಆನಂದ್ ವಿಹಾರ್, ಅಶೋಕ್ ವಿಹಾರ್ ಮತ್ತು ರೋಹಿಣಿ ಭಾಗಗಳಲ್ಲೂ ಸ್ಥಿತಿ ಗಂಭೀರವಾಗಿದೆ.

ಹೊಸ ನಿರ್ಬಂಧಗಳ ಅಡಿಯಲ್ಲಿ ಅನಗತ್ಯ ಕಟ್ಟಡ ನಿರ್ಮಾಣ, ನೆಲಸಮ ಕಾರ್ಯಗಳು, ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆ ಸಂಪೂರ್ಣ ನಿಷೇಧಿಸಲಾಗಿದೆ. ಹಳೆಯ ಡೀಸೆಲ್ ಚಾಲಿತ ಸರಕು ವಾಹನಗಳಿಗೆ ದೆಹಲಿಗೆ ಪ್ರವೇಶವಿಲ್ಲ. ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ 5ನೇ ತರಗತಿ ವರೆಗೆ ಹೈಬ್ರಿಡ್‌ ತರಗತಿಗಳಿಗೆ ಸೂಚನೆ ನೀಡಲಾಗಿದೆ. ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಮಾತ್ರ ಹಾಜರಾತಿ ಅವಕಾಶ ನೀಡಿ, ಉಳಿದವರಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ದೆಹಲಿ ಈಗ ಅಂತಿಮ ಅಪಾಯಕಾರಿ ಹಂತದಲ್ಲಿದ್ದು, ಪರಿಸ್ಥಿತಿ ಸುಧಾರಿಸದಿದ್ದರೆ ಇನ್ನಷ್ಟು ಕಠಿಣ ಕ್ರಮಗಳು ಅನಿವಾರ್ಯವಾಗುವ ಸಾಧ್ಯತೆ ಇದೆ.

error: Content is protected !!