ಬೀದಿ ನಾಯಿಗಳ ದಾಳಿಗೆ 12 ವರ್ಷದ ಬಾಲಕ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚೆಗೆ ಬೀದಿ ನಾಯಿಗಳ ದಾಳಿಗೆ ಮಕ್ಕಳು ಬಲಿಯಾಗುತ್ತಿರುವ ಘಟನೆಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇದೀಗ ಉತ್ತರ ಪ್ರದೇಶದಲ್ಲಿ ಬೀದಿ ನಾಯಿ ದಾಳಿಗೆ ಮತ್ತೊಂದು ಮಗು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. 12 ವರ್ಷದ ಬಾಲಕ ಬೀದಿ ನಾಯಿ ಅಟ್ಟಹಾಸಕ್ಕೆ ಮೃತಪಟ್ಟಿದ್ದಾನೆ.

ಮಂಗಳವಾರ (ಮೇ 2 ರಂದು) ಉತ್ತರ ಪ್ರದೇಶದ ಬರೇಲಿಯಲ್ಲಿರುವ ಸಿಬಿ ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಮೃತ ಹುಡುಗ ಅಯಾನ್.‌ ಈತ ಖಾನಾ ಗೌಂಟಿಯಾ ಗ್ರಾಮದಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿರುವ ವೇಳೆ ಬೀದಿ ನಾಯಿಗಳ ದಂಡು ಅವನ ಬಳಿ ಬಂದಿದೆ. ಇದರಿಂದ ಬಾಲಕ ಹೆದರಿ ಓಡಿದ್ದಾನೆ. ಓಡುವ ಭರದಲ್ಲಿ ಮೈದಾನದಲ್ಲಿ ಬಿದ್ದಿದ್ದಾನೆ. ಈ ವೇಳೆ ನಾಯಿಗಳು ಅವನ ಮೇಲೆ ಎರಗಿವೆ, ಬಾಲಕನ ಮೇಲೆ ಹಲ್ಲುಗಳಿಂದ ಕಚ್ಚಿ ಗಾಯ ಮಾಡಿವೆ.

ಇದನ್ನು ನೋಡಿದ ಸ್ಥಳೀಯರು ನಾಯಿಗಳ ಅಟ್ಟಹಾಸದಿಂದ ಬಾಲಕನನ್ನು ಬಿಡಿಸಿ, ಆಸ್ಪತ್ರಗೆ ದಾಖಲು ಮಾಡಿದ್ದಾರೆ. ಆದರೆ ತೀವ್ರಗಾಯಗೊಂಡಿದ್ದ ಬಾಲಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇನ್ನೊಂದು ಬಾಲಕನಿಗೂ ಗಾಯಗಳಾಗಿವೆ ಎಂದು ವರದಿ ತಿಳಿಸಿವೆ.

ಯುಪಿಯಲ್ಲಿ ಇಂಥ ಘಟನೆ ನಡೆದಿರುವುದು ಇದೇ ಮೊದಲೇನಲ್ಲ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗೆ ಹಲವು ಬಾರಿ ಪತ್ರ ಬರೆದಿದ್ದಾರೆ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!