ನಾನು ನಿಮ್ಮ ಪರವಾಗಿ ದೆಹಲಿಯಲ್ಲಿ ಕುಳಿತಿದ್ದೇನೆ, ನೀವೇ ನನ್ನ ರಿಮೋಟ್‌ ಕಂಟ್ರೋಲ್:‌ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಚುನಾವಣೆ ಸಮೀಪಿಸುತ್ತಿದೆ, ರಾಜ್ಯದ ಭವಿಷ್ಯ ನಿಮ್ಮ ಕೈಯಲ್ಲಿದೆ. ನಾನು ಜನರ ಪರವಾಗಿ ದೆಹಲಿಯಲ್ಲಿ ಕುಳಿತಿದ್ದೇನೆ. ನೀವೇ ನನ್ನ ರಿಮೋಟ್ ಕಂಟ್ರೋಲ್, ನಿಮ್ಮ ಸೇವಕನಾಗಿ, ನೀವು ಹೇಳಿದ್ದನ್ನು ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡುವ ಉದ್ದೇಶ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಪ್ರಧಾನಿ ಮೋದಿ ಬಹಿರಂಗ ಸಮಾವೇಶದಲ್ಲಿ ಮಾತನಾಡುತ್ತಾ, ಕರ್ನಾಟಕವನ್ನು ದೇಶದ ನಂಬರ್ 1. ರಾಜ್ಯವನ್ನಾಗಿ ಮಾಡುವ ಉದ್ಧೇಶ ಇದೆ. ಕೊರೊನಾ ಕಾಲದಲ್ಲಿ ಸಂಕಷ್ಟದ ಪರಿಸ್ಥಿತಿ ಉಂಟಾಗಿತ್ತು. ಈ ಸಮಯದಲ್ಲಿ ಯಾವ ಸರ್ಕಾರ ಸಹಾಯ ಮಾಡಿದೆ ಎಂಬುದು ಜನರಿಗೆ ತಿಳಿದಿದೆ. ಕೊರೊನಾ ಮುಕ್ತಕ್ಕಾಗಿ ನಮ್ಮ ಸರ್ಕಾರ ಕೆಲಸ ಮಾಡಿದೆ ಎಂದರು.

ಡಬಲ್‌ ಇಂಜಿನ್‌ ಸರ್ಕಾರದಿಂದ ಅಭಿವೃದ್ಧಿ

ಕಾಂಗ್ರೆಸ್, ಜೆಡಿಎಸ್ ಆಡಳಿತಾವಧಿಯಲ್ಲಿ ಸಾಲದ ಪ್ರಮಾಣ ಹೆಚ್ಚಾಗಿತ್ತು. ಈ ಎರಡು ಪಕ್ಷಗಳು ಅಭಿವೃದ್ಧಿಗೆ ಯಾವುದೇ ಒತ್ತು ನೀಡಿಲ್ಲ. ಡಬಲ್ ಇಂಜಿನ್ ಸರ್ಕಾರ ಬಂದ ರಾಜ್ಯದಲ್ಲಿ ಅಭಿವೃದ್ಧಿಗಳಾಗಿವೆ. ಇದರಿಂದ ಪ್ರತಿಯೊಬ್ಬ ಮತದಾರನಿಗೂ ಸಹಕಾರಿಯಾಗಿದೆ. ಹೀಗಾಗಿ ಈ ಬಾರಿಯ ಜನರ ನಿರ್ಧಾರ ಬಿಜೆಪಿ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೂಡಿಕೆ ಹೆಚ್ಚಳ

2018ರ ಚುನಾವಣೆಯ ನಂತರ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಬರೀ ಮೂರುವರೆ ವರ್ಷಗಳ ಆಡಳಿತ ಸಿಕ್ಕಿದೆ. ಈ ವೇಳೆ ಸಮ್ಮಿಶ್ರ ಸರ್ಕಾರದ ಕೊಳೆ ತೊಳೆಯುವುದರ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದೆ. ಕಾಂಗ್ರೆಸ್​-ಜೆಡಿಎಸ್​​ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ವಿದೇಶದಿಂದ 30 ಸಾವಿರ ಕೋಟಿ ರೂ. ಹೂಡಿಕೆ ಆಗಿತ್ತು. ಆದರೆ ಡಬಲ್ ಇಂಜಿನ ಸರ್ಕಾರದಲ್ಲಿ 90 ಸಾವಿರ ಕೊಟಿ ರೂ. ಹೂಡಿಕೆ ಆಗಿದೆ. ಇದು ರಾಜ್ಯದ ಅಭಿವೃದ್ಧಿಯ ಬಗ್ಗೆ ಬಿಜೆಪಿ ಸರ್ಕಾರಕ್ಕಿರುವ ಧ್ಯೇಯ ಎಂದು ತಿಳಿಸಿದರು.

ಜನರಿಗೆ ನಮ್ಮ ಮೇಲೆ ನಂಬಿಕೆಯಿದೆ

ಬಡವರು ಹಸಿದುಕೊಂಡು ಮಲಗಬಾರದು. ಅವರಿಗೆ ಉಚಿತ ಪಡಿತರ ನೀಡುವ ಮೂಲಕ ಅವರ ಮನೆಯ ಒಲೆ ಉರಿಯುವಂತೆ ಮಾಡಿದ್ದೇವೆ. ದೇಶದ ಪ್ರತಿಯೊಬ್ಬ ನಾಗರೀಕ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಜಗತ್ತಿನ ಬಲಿಷ್ಠ ರಾಷ್ಟ್ರಗಳೆಲ್ಲ ಸಾಂಕ್ರಾಮಿಕ ಸಂಕಷ್ಟದಲ್ಲಿ ಸೋತು ಕೂತಿದ್ದಾಗ ಬಿಜೆಪಿ ಸರ್ಕಾರ ದೇಶವಾಸಿಗಳನ್ನು ಹೇಗೆ ರಕ್ಷಿಸಿದೆ ಎಂಬುದರ ಬಗ್ಗೆ ಜನರಿಗೆ ಗೊತ್ತಿದೆ.

ಕಾಂಗ್ರೆಸ್‌ ಭ್ರಷ್ಟ ವ್ಯವಸ್ಥೆಯನ್ನು ನಿಯಂತ್ರಿಸಿದ್ದೇವೆ

ಕಾಂಗ್ರೆಸ್ ಸರ್ಕಾರ ದಾಖಲೆಯಲ್ಲಿ‌ ಅಸ್ತಿತ್ವದಲ್ಲಿ ಇಲ್ಲದವರಿಗೆ, ಹೆಸರೇ ಇಲ್ಲದವರಿಗೆ ಸೌಲಭ್ಯ ನೀಡುತ್ತಿತ್ತು. ಅಂತಹ ನಕಲಿ ಹೆಸರುಗಳ ಸಂಖ್ಯೆ ಕರ್ನಾಟಕದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿತ್ತು. ನಕಲಿ ಹೆಸರಿನ‌ ಹಣ ಕಾಂಗ್ರೆಸ್ ಭ್ರಷ್ಟಾಚಾರದ ಖಾಲಿ ತಿಜೋರಿಗೆ ಹೋಗುತ್ತಿತ್ತು. ನಾನು ಕಾಂಗ್ರೆಸ್​ನ ಭ್ರಷ್ಟ ವ್ಯವಸ್ಥೆಯನ್ನು ನಿಯಂತ್ರಿಸಿದ್ದೇನೆ. ಬಡವರಿಗೆ ಸೌಲಭ್ಯ ಸಿಗಲು ಮುಳುವಾಗಿದ್ದ 10 ಕೋಟಿ ನಕಲಿ ಹೆಸರುಗಳನ್ನು ತೆಗೆದು ಹಾಕಿದ್ದೇನೆ. ಇದರಿಂದ ಕಾಂಗ್ರೆಸ್ ನಾಯಕರು ನನ್ನ ಮೇಲೆ ಸಿಟ್ಟಾಗಿದ್ದಾರೆ.‌ ಮೂರು ಮುಕ್ಕಾಲು ಲಕ್ಷ ಕೋಟಿ ರೂ. ಹಣ ನಷ್ಟವಾಗುವುದನ್ನು ತಡೆದಿದ್ದೇನೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದಕ್ಕೆ ಕಾಂಗ್ರೆಸ್‌ ವೀರೋಧಿಸಿತ್ತು

ಕಾಂಗ್ರೆಸ್ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿರುವುದಕ್ಕೆ ಹೊಟ್ಟೆಕಿಚ್ಚು ಪಟ್ಟು ವಿರೋಧ ಮಾಡಿತ್ತು. ಈಗ ಕಾಂಗ್ರೆಸ್ ಅ​ನ್ನು ಅಧಿಕಾರದಿಂದ ದೂರವಿಡಬೇಕೆಂದು ಆದಿವಾಸಿ ಜನರೇ ನಿರ್ಧರಿಸಿದ್ದಾರೆ. ಎಲ್ಲಾ ಸಮಾಜದ ಅಭಿವೃದ್ಧಿ ಬಿಜೆಪಿಯ ಸಂಕಲ್ಪವಾಗಿದೆ ಎಂದು ಮೋದಿ ಹೇಳಿದರು.

ಭ್ರಷ್ಟಾಚಾರದ ಬೇರು ಕಿತ್ತು ಹಾಕಿದ್ದೇವೆ

ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ಬೇರೂರಿದೆ. ಕಾಂಗ್ರೆಸ್‌ ನನ್ನನ್ನು ಕಂಡರೆ ವಿಷಕಾರುತ್ತದೆ. ಏಕೆಂದರೆ ಬಿಜೆಪಿ ಸರ್ಕಾರ ಕಾಂಗ್ರೆಸ್‌ನ ಭ್ರಷ್ಟಾಚಾರದ ಬೇರನ್ನು ಕಿತ್ತು ಹಾಕಿದೆ ಎಂದು ಮೋದಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!