ಹೊಸದಿಗಂತ ವರದಿ,ವಿಜಯಪುರ:
ಬಜರಂಗ ದಳ ನಿಷೇಧ ಎನ್ನುವುದು ನನ್ನ ವೈಯಕ್ತಿಕವಾಗಿ ಸರಿಯಲ್ಲ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಬಜರಂಗದಳ ಅಷ್ಟೇ ಏಕೆ ಸಮಾಜದಲ್ಲಿ ಯಾರೇ ಅಶಾಂತಿ, ಗಲಭೆ ಸೃಷ್ಟಿ ಮಾಡಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ಈ ನಿಟ್ಟಿನಲ್ಲಿ ಧಾರ್ಮಿಕವಾಗಿ ನಿಂದಿಸುವವರ ವಿರುದ್ಧ ಕ್ರಮವಾಗಬೇಕು ಎಂದು ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರ ಪೂರ್ಣ ವಿಫಲವಾಗಿದ್ದು, ಇದು ಟ್ರಬಲ್ ಇಂಜಿನ್ ಸರ್ಕಾರವಾಗಿದೆ ಎಂದು ದೂರಿದರು.
ಸಕ್ರೀಯ ರಾಜಕಾರಣ ಪ್ರವೇಶಿಸುವ ಕುರಿತು ಇನ್ನೂ ಯೋಚನೆ ಮಾಡಿಲ್ಲ, ಸದ್ಯ ಸ್ಟಾರ್ ಪ್ರಚಾರಕಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದೇನೆ. ಅನಾರೋಗ್ಯ ಕಾರಣದಿಂದಾಗಿ ಸಕ್ರೀಯ ರಾಜಕಾರಣದಿಂದ ದೂರ ಇದ್ದೆ, ಈಗ ಸಂಪೂರ್ಣವಾಗಿ ಆರೋಗ್ಯವಾಗಿರುವೆ ಎಂದರು.
ಈಗಾಗಲೇ ವರುಣ, ಮಂಡ್ಯ, ನಂಜನಗೂಡು ಮತಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ನಡೆಸಿದ್ದು, ಇಂದು ಬಬಲೇಶ್ವರ ಮತಕ್ಷೇತ್ರದಲ್ಲೂ ಚುನಾವಣೆ ಪ್ರಚಾರ ನಡೆಸಿರುವೆ. ನಮ್ಮ ತಂದೆಗೆ ಎಂ.ಬಿ. ಪಾಟೀಲರು ತೀರ ಆಪ್ತರಾಗಿದ್ದರು. ಹೀಗಾಗಿ ಅವರ ಮತಕ್ಷೇತ್ರಕ್ಕೆ ಚುನಾವಣೆ ಪ್ರಚಾರಕ್ಕೆ ಬಂದಿರುವೆ. ಬಬಲೇಶ್ವರ ಕ್ಷೇತ್ರದಲ್ಲಿ ಅವರು, ನೀರಾವರಿ ಯೋಜನೆಗಳನ್ನು ಕೈಗೊಂಡಿದ್ದು, ಹೀಗಾಗಿ ಕ್ಷೇತ್ರದಲ್ಲಿ ಅಂತರ್ಜಲ ವೃದ್ಧಿಯಾಗಿದೆ ಎಂದರು.
ಕಾವೇರಿ ತೀರ್ಪು ಹೊರಬರುವ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲರು, ಯಾವುದೇ ರೀತಿಯ ಹಮ್ಮು-ಬಿಮ್ಮಿನಿಂದ ವರ್ತಿಸದೇ, ತೀರ್ಪಿಗಾಗಿ ಅಂಕಿ, ಅಂಶ ಸಂಗ್ರಹಣೆ, ವಿಚಾರ ವಿಮರ್ಶೆ ಮಾಡಿರುವುದು ಕಣ್ಣಾರೆ ಕಂಡಿದ್ದೇನೆ, ಇದು ರೈತರು ಹಾಗೂ ನೀರಾವರಿ ವಿಷಯಕ್ಕೆ ಎಂ.ಬಿ. ಪಾಟೀಲರ ಬದ್ಧತೆ ಎಂದರು.
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುತ್ರರು ಗಾಳಿಯಲ್ಲಿ ಗುಂಡು ಹಾರಿಸುವ ದೃಶ್ಯಗಳು ಮೈ ಜುಂ ಎನಿಸುವಂತಹದ್ದು, ಈ ರೀತಿಯ ಸಂಸ್ಕೃತಿ ಬೆಳೆಯಬಾರದು, ನಮ್ಮ ಮಕ್ಕಳಿಗೆ ಬಂದೂಕು ಬೇಡ ಪುಸ್ತಕ ಕೊಡಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲರ ಪತ್ನಿ ಆಶಾ ಪಾಟೀಲ, ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.