ಹೊಸದಿಗಂತ ವರದಿ,ಮದ್ದೂರು :
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಟ್ಟಣದಲ್ಲಿ ರೋಡ್‌ಶೋ ನಡೆಸುವ ಮೂಲಕ ಮದ್ದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಪಿ. ಸ್ವಾಮಿ ಪರ ಮತಯಾಚನೆ ಮಾಡಿದರು.
ತಾಲೂಕಿನ ಗೆಜ್ಜಲಗೆರೆ ಸಮೀಪದ ಹೆಲಿಪ್ಯಾಡ್‌ಗೆ ಬೆಳಗ್ಗೆ 11 ಗಂಟೆ ಸಮಾರಿಗೆ ಆಗಮಿಸಿದ ಜೆ.ಪಿ. ನಡ್ಡಾ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಅಭ್ಯರ್ಥಿ ಎಸ್.ಪಿ. ಸ್ವಾಮಿ, ತಾಲೂಕು ಅಧ್ಯಕ, ಸಿ.ಕೆ. ಸತೀಶ್ ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು.
ನಂತರ ಪಟ್ಟಣದ ಪ್ರವಾಸಿ ಮಂದಿರ ವೃತ್ತಕ್ಕೆ ಆಗಮಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳು ಬೆಲ್ಲದ ಆರತಿ ಬೆಳಗಿ ಪುಷ್ಪವೃಷ್ಠಿಗರೆದು ಸಾಂಪ್ರದಾಯಿಕ ಸ್ವಾಗತ ಕೋರಿದರು.
ತರುವಾಯ ಹಳೇ ಎಂ.ಸಿ. ರಸ್ತೆಯಿಂದ ಪ್ರಮುಖ ಬೀದಿಗಳ ಮೂಲಕ ಕೊಲ್ಲಿ ವೃತ್ತದವರೆಗೆ ರೋಡ್‌ಶೋ ನಡೆಸಿ ಮದ್ದೂರು ಕ್ಷೇತ್ರದ ಜನತೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ರ್ಯಾಲಿ ಅಂತ್ಯದಲ್ಲಿ ಕಾರ‌್ಯಕರ್ತರು ಮತ್ತು ಜನತೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಮತ್ತು ರಾಜ್ಯದಲ್ಲಿ ಪ್ರಧಾನಿ ನರೇಂದ್ರಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಗಳು ಮಾಡಿರುವ ಸಾಧನೆಯ ರಿಪೋಟ್ ಕಾರ್ಡ್ ಇದೆ. ಈ ಸಾಧನೆಗಳೇ ನಮಗೆ ರಿಪೋರ್ಟ್ ಕಾರ್ಡ್‌ಗಳು ಎಂದು ಕೋಟ್ಯಾಂತರ ರೂ.ಗಳ ಭ್ರಷ್ಟಾಚಾರದ ಹಗರಣಗಳಲ್ಲಿ ಸಿಲುಕಿ ಜಾಮೀನಿನ ಮೇಲಿರುವ ಕಾಂಗ್ರೆಸ್ ನಾಯಕರುಗಳು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಯಾವುದೇ ಗ್ಯಾರಂಟಿ ಇಲ್ಲ. ಇನ್ನು ಆ ಪಕ್ಷದ ನಾಯಕರು ಘೋಷಣೆ ಮಾಡಿರುವ ಗ್ಯಾರಂಟಿ ಕಾರ್ಡ್‌ಗಳಿಗೆ ಯಾವ ಬೆಲೆ ಇದೆ ಎಂದು ಪ್ರಶ್ನಿಸಿದರು.
ಕೇವಲ ರಾಜಕೀಯ ಲಾಭಕ್ಕಾಗಿ ಸಿದ್ಧಾಂತವನ್ನು ಅಡವಿಡುವ ಮತ್ತು ಯಾರ ಜೊತೆಗಾದರೂ ಕೈ ಜೋಡಿಸುವ ಜೆಡಿಎಸ್ ನಾಯಕರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಚುನಾವಣೆ ನಂತರ ಸರ್ಕಾರ ರಚಿಸುವಲ್ಲಿ ನಾವೇ ನಿರ್ಣಾಯಕರು ಎಂದು ಜೆಡಿಎಸ್ ನಾಯಕರು ಭೀಗುತ್ತಿದ್ದಾರೆ. ಇವರ ಕನಸುಗಳನ್ನು ಸಾಕಾರಗೊಳಿಸಲು ಮತದಾರರು ಚುನಾವಣೆಯಲ್ಲಿ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರ ಪವರ್‌ಫುಲ್ ಸರ್ಕಾರವಾಗಿದೆ. ಮತದಾರರು ಒಂದು ವೇಳೆ ಎಚ್ಚರ ತಪ್ಪಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕಾದರೆ ಈ ಡಬಲ್ ಇಂಜಿನ್ ಸರ್ಕಾರ ಬೇಕು. ಹೀಗಾಗಿ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ನಡ್ಡಾ ಮನವಿ ಮಾಡಿದರು.
ಜಿ.ಪಂ. ಮಾಜಿ ಸದಸ್ಯರಾದ ಸಾದೊಳಲು ಕೃಷ್ಣೇಗೌಡ, ಬೋರಯ್ಯ, ಮನುಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಎನ್.ಆರ್. ಪ್ರಕಾಶ್, ಹೆಮ್ಮನಹಳ್ಳಿ ಗ್ರಾ.ಪಂ. ಅಧ್ಯಕ್ಷ ನಂದೀಶ್‌ಗೌಡ, ಮಹಿಳಾ ಘಟಕದ ಪದಾಧಿಕಾರಿಗಳಾದ ಶ್ವೇತಾ, ಮಮತಾ ರಾಂಕಾ, ರುಕ್ಮಿಣಿ, ಸಿಂಧು ಮತ್ತಿತರರಿದ್ದರು.