ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿವಂಗತ ಮಾಜಿ ಸಚಿವ, ಹಿರಿಯ ರಾಜಕಾರಣಿ ಹಾಗೂ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಗಾಗಿ ಸಿದ್ದಗಂಗಾ ಮಠದಿಂದ ವಿಶೇಷ ವಿಭೂತಿ ಗೌರವವನ್ನು ಕಳುಹಿಸಲಾಗಿದೆ. ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಾ ಸ್ವಾಮೀಜಿಗಳು ತಮ್ಮ ವಾಹನದಲ್ಲಿ ಸುಮಾರು 100 ವಿಶೇಷ ವಿಭೂತಿ ಗಟ್ಟಿಗಳನ್ನು ಸ್ವತಃ ದಾವಣಗೆರೆಯತ್ತ ತೆಗೆದುಕೊಂಡು ಹೋಗಿದ್ದಾರೆ.
ಸಿದ್ದಲಿಂಗಾ ಸ್ವಾಮೀಜಿಗಳು ಈ ಕುರಿತು ಪ್ರತಿಕ್ರಿಯಿಸಿ, “ಶಿವಶಂಕರಪ್ಪನವರು ನಮ್ಮ ಸಮಾಜದ ಶ್ರೇಷ್ಠ ಮುಖಂಡರಾಗಿದ್ದರು. ಸುದೀರ್ಘ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಸೇವೆಯ ಮೂಲಕ ಅವರು ಇಡೀ ನಾಡಿಗೆ ಮತ್ತು ಜಗತ್ತಿಗೆ ಪರಿಚಿತರಾಗಿದ್ದರು,” ಎಂದು ಸ್ಮರಿಸಿದರು.
ದಾವಣಗೆರೆಯನ್ನು ಕೇವಲ ವಾಣಿಜ್ಯ ನಗರಿಯಾಗಿ ಉಳಿಯದೆ, ಅದಕ್ಕೆ ‘ಶೈಕ್ಷಣಿಕ ನಗರಿ’ಯ ಕೀರ್ತಿ ತಂದುಕೊಟ್ಟ ಶ್ರೇಯಸ್ಸು ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ ಎಂದು ಶ್ರೀಗಳು ಕೊಂಡಾಡಿದ್ದಾರೆ. ರಾಜಕೀಯ ಜೀವನದಲ್ಲಿ ಅವರು ಒಂದೇ ಪಕ್ಷದಲ್ಲಿ ಛಾಪು ಮೂಡಿಸಿ, ಪಕ್ಷ ನಿಷ್ಠೆಯಿಂದಿದ್ದು, ಪಕ್ಷವನ್ನು ಬೆಳೆಸಿದವರು ಎಂದು ಹೇಳಿದರು.
ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಅವರು ಮಾಡಿದ ಸೇವೆಯನ್ನು ಶ್ರೀಗಳು ವಿಶೇಷವಾಗಿ ಉಲ್ಲೇಖಿಸಿದರು. “ವೀರಶೈವ ಮಹಾಸಭಾದ ಸಾಮಾಜಿಕ ಮತ್ತು ಆರ್ಥಿಕ ಬಲವರ್ಧನೆಗೆ ಅವರ ಕೊಡುಗೆ ಅಪಾರ. ಸಮಾಜದ ಐಕ್ಯತೆ ಮತ್ತು ಒಗ್ಗಟ್ಟನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ಕಾರ್ಯನಿರ್ವಹಿಸಿದರು. ಸಮಾಜದ ಜನರು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮುಂದುವರಿಯಬೇಕು ಎಂಬ ಕನಸು ಕಂಡಿದ್ದರು,” ಎಂದು ಹೇಳಿದರು.
“ಶಾಮನೂರು ಶಿವಶಂಕರಪ್ಪನವರು ರಾಜಕೀಯ ಮತ್ತು ಸಾಮಾಜಿಕ ಸೇವೆಯಲ್ಲಿ ವೀರ ಮತ್ತು ಧೀರರಾಗಿದ್ದರು. ಅವರು ಸಮಾಜದ ಅವಿಸ್ಮರಣೀಯ ನಾಯಕರು. ಅವರು ಬಿಟ್ಟುಹೋದ ಮಾದರಿ ಮತ್ತು ಆದರ್ಶಗಳು ಅನುಕರಣೀಯ,” ಎಂದು ಬಣ್ಣಿಸಿದ ಶ್ರೀಗಳು, ಸಿದ್ದಗಂಗಾ ಮಠದಿಂದ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಅವರು ಆರು-ಏಳು ಬಾರಿ ಶಾಸಕರಾಗಿದ್ದನ್ನು ನೆನಪಿಸಿದ ಶ್ರೀಗಳು, “ಅವರು ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದರೂ ಕಂಡಿರಬಹುದು, ಆದರೆ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ,” ಎಂದು ನುಡಿದರು.

