ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಉಂಟಾಗಿರುವ ತೀವ್ರ ದಟ್ಟ ಮಂಜು ಮತ್ತು ಪ್ರತಿಕೂಲ ಹವಾಮಾನದ ಕಾರಣದಿಂದ ಕರ್ನಾಟಕದ 21 ಜನಪ್ರತಿನಿಧಿಗಳು ಇಂಡಿಗೋ ವಿಮಾನದ ಒಳಗೆ ಸುಮಾರು ನಾಲ್ಕು ಗಂಟೆಗಳ ಕಾಲ ಸಿಲುಕಿಕೊಂಡ ಘಟನೆ ನಡೆದಿದೆ.
ಕರ್ನಾಟಕದ ಮಂತ್ರಿಗಳು ಮತ್ತು ಕಾಂಗ್ರೆಸ್ ಶಾಸಕರು ಭಾನುವಾರದಂದು ಆಯೋಜನೆಗೊಂಡಿದ್ದ ‘ವೋಟ್ ಚೋರಿ ಸಮಾವೇಶ’ದಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದರು. ಕಾರ್ಯಕ್ರಮ ಮುಗಿದ ಬಳಿಕ, ದಾವಣಗೆರೆಯಲ್ಲಿ ಇಂದು ನಡೆಯಲಿರುವ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವರು ದೆಹಲಿಯಿಂದ ಬೆಳಗಾವಿಗೆ ಪ್ರಯಾಣ ಬೆಳೆಸಲು ಸಿದ್ಧರಾಗಿದ್ದರು.
ಪ್ರಯಾಣದ ಪ್ರಕಾರ, ವಿಮಾನವು ಬೆಳಗ್ಗೆ 5:30 ಕ್ಕೆ ದೆಹಲಿಯಿಂದ ಟೇಕ್-ಆಫ್ ಆಗಬೇಕಿತ್ತು. ಆದರೆ, ಪ್ರಯಾಣಿಕರು ವಿಮಾನದ ಒಳಗೆ ಕುಳಿತುಕೊಂಡ ಬಳಿಕ, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಹೊಗೆಯ ಕಾರಣದಿಂದ ವಿಮಾನದ ಹಾರಾಟಕ್ಕೆ ಅನುಮತಿ ಸಿಗಲಿಲ್ಲ.
ಬೆಳಗ್ಗೆ 10 ಗಂಟೆಯಾದರೂ ವಿಮಾನ ಟೇಕ್-ಆಫ್ ಆಗಲಿಲ್ಲ. ಹೀಗಾಗಿ, ಶಾಸಕರು ಸತತ ನಾಲ್ಕಕ್ಕಿಂತ ಹೆಚ್ಚು ಗಂಟೆಗಳ ಕಾಲ ವಿಮಾನದ ಒಳಗೇ ಕಾಯುವಂತಾಯಿತು. ದೆಹಲಿಯಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳ ಟೇಕ್-ಆಫ್ ಮತ್ತು ಲ್ಯಾಂಡಿಂಗ್‌ಗೆ ಗಂಭೀರ ಸಮಸ್ಯೆ ಉಂಟಾಗಿರುವ ಕಾರಣ, ವಿಮಾನವು ಎಷ್ಟು ಹೊತ್ತಿಗೆ ಹೊರಡಬಹುದು ಎಂಬ ಬಗ್ಗೆ ಸಿಬ್ಬಂದಿಯಿಂದಲೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಹೆಚ್‌ಕೆ ಪಾಟೀಲ್, ಲಕ್ಷ್ಮೀ ಹೆಬಾಳ್ಕರ್, ಶರಣ ಪ್ರಕಾಶ್ ಪಾಟೀಲ್, ಸತೀಶ್ ಜಾರಕಿಹೊಳಿ, ಜಿ ಎಸ್ ಪಾಟೀಲ್, ಈಶ್ವರ್ ಖಂಡ್ರೆ, ಎಂ ಬಿ ಪಾಟೀಲ್, ಕೆಜೆ ಜಾರ್ಜ್ ಸೇರಿದಂತೆ ಕೋನರೆಡ್ಡಿ, ಬಸನಗೌಡ ಬಾದರ್ಲಿ, ಆನಂದ್ ಗಡದೇವರಮಠ, ರಾಜು ಗೌಡ, ಸಲೀಂ ಅಹಮದ್, ತನ್ವೀರ್ ಸೇಠ್, ಮಾಲೀಕಯ್ಯ ಗುತ್ತೇದಾರ್, ಜೆ ಟಿ ಪಾಟೀಲ್, ತಿಪ್ಪಣ್ಣ ಕಾಮಕನೂರ್, ನಾಗೇಂದ್ರ, ಅಲ್ಲಮಪ್ರಭು, ಮತ್ತು ರೆಹಮಾನ್ ಖಾನ್ ಅವರು ವಿಮಾನದಲ್ಲಿ ಸಿಲುಕಿಕೊಂಡ ಶಾಸಕರಾಗಿದ್ದಾರೆ.

