Tuesday, December 16, 2025

ನ್ಯಾಷನಲ್ ಹೆರಾಲ್ಡ್ ಕೇಸ್: ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರ ನೀಡಲು ಡಿಕೆಶಿ ಕಾಲಾವಕಾಶ ಕೋರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನೀಡಿರುವ ನೋಟಿಸ್‌ಗೆ ಉತ್ತರ ನೀಡಲು ತಾವು ಕಾಲಾವಕಾಶ ಕೋರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ದೆಹಲಿ ಪೊಲೀಸರಿಗೆ ಉತ್ತರ ನೀಡಲು ನಿರ್ಧರಿಸಲಾಗಿತ್ತು. ಆದರೆ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ಕಾರಣ ವಿಶೇಷ ವಿಮಾನದ ಮೂಲಕ ದಾವಣಗೆರೆಗೆ ತೆರಳುತ್ತಿದ್ದು, ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಉತ್ತರ ನೀಡಲು ಕಾಲಾವಕಾಶ ಕೇಳುವುದಾಗಿ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಪೊಲೀಸರು ನೀಡಿರುವ ನೋಟಿಸ್‌ನ ನನ್ನ ಉತ್ತರದ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೇನೆ. ನೋಟಿಸ್‌ನಲ್ಲಿ ಎಫ್‌ಐಆರ್ ಪ್ರತಿಯನ್ನು ಲಗತ್ತಿಸಿಲ್ಲ. ಇ.ಡಿ. (ಜಾರಿ ನಿರ್ದೇಶನಾಲಯ) ಗೆ ಈಗಾಗಲೇ ಉತ್ತರ ನೀಡಿದ್ದೇವೆ. ಆದರೆ, ಈ ಹೊಸ ಎಫ್‌ಐಆರ್ ಪ್ರತಿಯಲ್ಲಿ ಏನಿದೆ ಎಂದು ಓದಿಲ್ಲ. ಕೇವಲ ನೋಟಿಸ್ ಮಾತ್ರ ನೀಡಿದ್ದಾರೆ. ಆದ್ದರಿಂದ, ಎಫ್‌ಐಆರ್ ಪ್ರತಿ ನೀಡಿ ಎಂದು ನಾನು ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ತಾವು ಎಐಸಿಸಿ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲ ಅವರನ್ನು ಭೇಟಿಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನಾನು ದೆಹಲಿಗೆ ಬಂದಾಗ ಎಲ್ಲರನ್ನೂ ಭೇಟಿ ಮಾಡುವುದು ಸಹಜ. ಸುರ್ಜೆವಾಲ ಅವರನ್ನು, ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು, ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಬೇಕು. ಭಾನುವಾರ ಇಂದಿರಾ ಭವನದಲ್ಲಿ ನಡೆದ ಭೋಜನ ಕೂಟದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಿದ್ದೆ” ಎಂದು ತಿಳಿಸಿದರು.

error: Content is protected !!