ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಚುನಾವಣೆ ಗೆ (Karnataka Assembly Election 2023) ಇಂದು ಮತದಾನ ನಡೆಯುತ್ತಿದ್ದು, ಹಲವು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಸಹ ತಮ್ಮ ತಮ್ಮ ಕ್ಷೇತ್ರದಲ್ಲಿ ಇಂದು ಮತಚಲಾವಣೆ ಮಾಡಿದ್ದಾರೆ.
ಹಿರಿಯ ನಟ ಅನಂತ್ನಾಗ್ (Ananth Nag) ಸಹ ಇಂದು ಮತಚಲಾವಣೆ ಮಾಡಿದ್ದು ಮತದಾನ ಮಾಡಿದ ಬಳಿಕ ಮಾಧ್ಯಮಗಳೊಟ್ಟಿಗೆ ಅಭಿವೃದ್ಧಿಯ ಬಗ್ಗೆ ಹಾಗೂ ಯಾವ ಕಾರಣಕ್ಕೆ ಮತ ಚಲಾಯಿಸಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ, ಮೂಲಭೂತ ಸೌಕರ್ಯಗಳು ಇಂದು ಎಲ್ಲರಿಗೂ ದೊರೆಯುತ್ತಿವೆ. ನರೇಂದ್ರ ಮೋದಿಯವರು ಬಂದ ನಂತರವಂತೂ ಒಳ್ಳೆಯ ಅಭಿವೃದ್ಧಿ ಆಗುತ್ತಿವೆ. ಫ್ಲೈ ಓವರ್, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಎಲ್ಲ ಬಹಳ ಚೆನ್ನಾಗಿ ಆಗುತ್ತಿವೆ. ಮೂಲಭೂತ ಸೌಕರ್ಯದಿಂದ ಮೇಲೆ ಹೋಗುವ ಪ್ರಯತ್ನ ನಾವು ಮಾಡಬೇಕು. ಪ್ರತಿಸಲವೂ ನಾವು ಸಾಲಮನ್ನಾ, ಉಚಿತ ರೇಷನ್ ಇವುಗಳನ್ನು ದಾಟಿ ಮುಂದೆ ಹೋಗಬೇಕು ಎಂದಿದ್ದಾರೆ. ಆ ಮೂಲಕ ಪರೋಕ್ಷವಾಗಿ ಸಾಲಮನ್ನಾ ಮಾಡುವ ಭರವಸೆ, ಉಚಿತ ಅಕ್ಕಿ ನೀಡುವ ಭರವಸೆ ನೀಡುವವರಿಗೆ ಮತನೀಡಬೇಡಿ ಎಂದಿದ್ದಾರೆ.
ಯೂರೋಪ್, 27 ದೇಶಗಳ ಒಕ್ಕೂಟ, ಅವರು ಬಹಳ ಅಭಿವೃದ್ಧಿ ಸಾಧಿಸಿದ್ದಾರೆ. ಅವರು ಕೆಳಸ್ತರದಲ್ಲಿ ಇಲ್ಲ. ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ) ಎಂದು ಏನನ್ನು ಕರೀತೀವಿ ಅದು ಯೂರೋಪ್ನಲ್ಲಿಲ್ಲ. ಅದೇ ರೀತಿಯ ಸ್ವರ್ಗ ನಮ್ಮಲ್ಲೂ ನಿರ್ಮಾಣ ಆಗಬೇಕು. ಬಡತನ ಸಂಪೂರ್ಣವಾಗಿ ನಿರ್ನಾಮವಾಗಬೇಕು, ಅಂತಹಾ ಸಮಯ ಬೇಗ ಬರಲಿ ಎಂದು ನಾನು ಆಶಿಸುತ್ತೇನೆ, ಯೂರೋಪ್ ಮಾದರಿಯಲ್ಲಿ ನಾವು ಬೆಳೆಯಬೇಕು, ಬಿಲೋ ಪವರ್ಟಿ ಲೈನ್ ಎನ್ನುವ ಪದವೇ ಇರಬಾರದು ಎಂದರು.
ನಿನ್ನೆಯಿಂದ ನಾವು ನೋಡುತ್ತಿದ್ದೇವೆ ನಮ್ಮ ಪಕ್ಕದ ದೇಶದಲ್ಲಿ ಏನಾಗುತ್ತಿದೆ ಎಂದು. ಎಷ್ಟು ಗಲಾಟೆಗಳು ಆಗುತ್ತಿವೆ ಎಂದು. ಅದಕ್ಕೆ ಹೋಲಿಸಿಕೊಂಡರೆ ನಾವು ಬಹಳ ಚೆನ್ನಾಗಿದ್ದೇವೆ, ಗಟ್ಟಿಯಾದ ಪ್ರಜಾಪ್ರಭುತ್ವದ ವ್ಯವಸ್ಥೆ ಮಾಡಿಕೊಂಡಿದ್ದೇವ” ಎಂದು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಘಟನೆಯನ್ನು ಉದಾಹರಣೆಯಾಗಿ ನೀಡಿ ಅನಂತ್ನಾಗ್ ಹೇಳಿದರು.