ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಅಕ್ರಮವಾಗಿ ಮೊಬೈಲ್ ಇಟ್ಟುಕೊಂಡಿರುವುದು ಮತ್ತೊಮ್ಮೆ ತಪಾಸಣೆ ವೇಳೆ ಬೆಳಕಿಗೆ ಬಂದಿದೆ.
ಪ್ರಭಾರ ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ಅವರ ನೇತೃತ್ವದಲ್ಲಿ ನಡೆದ ಕೂಲಂಕುಷ ತಪಾಸಣೆಯ ಸಂದರ್ಭದಲ್ಲಿ, ಜೈಲಿನ ಆವರಣದೊಳಗೆ 7 ಮೊಬೈಲ್‌ಗಳು ಸೇರಿದಂತೆ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ.
ಕೈದಿಗಳ ಬಳಿ ನಿಷೇಧಿತ ವಸ್ತುಗಳು ಪತ್ತೆಯಾಗುವುದಕ್ಕೂ ಮುನ್ನ, ಜೈಲಿನಲ್ಲಿ ಕೇವಲ ಒಂದೇ ವಾರದಲ್ಲಿ ಎರಡು ಬಾರಿ ಗಲಾಟೆ ನಡೆದಿತ್ತು. ಮಾದಕ ಪದಾರ್ಥಗಳನ್ನು ನೀಡಲು ಸಿಬ್ಬಂದಿ ನಿರಾಕರಿಸಿದ ಕಾರಣಕ್ಕೆ ಕೈದಿಗಳು ಗಲಾಟೆ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಜೈಲರ್ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದರ ಜೊತೆಗೆ, ಜೈಲಿನಲ್ಲಿದ್ದ ಕಂಪ್ಯೂಟರ್ ಮತ್ತು ಟಿವಿಗಳನ್ನು ಸಹ ಒಡೆದು ಹಾಕಿದ್ದರು.
ಈ ಗಂಭೀರ ಘಟನೆಗಳ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಬ್ಯಾರಕ್‌ಗಳನ್ನು ತೀವ್ರವಾಗಿ ಪರಿಶೀಲನೆ ನಡೆಸಿದಾಗ ಅಕ್ರಮ ಮೊಬೈಲ್‌ಗಳು ಮತ್ತು ಇತರ ನಿಷೇಧಿತ ವಸ್ತುಗಳು ಸಿಕ್ಕಿವೆ. ಘಟನೆ ಸಂಬಂಧ ಜೈಲರ್ ಅವರು ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೈಲಿನಲ್ಲಿ ಗಲಾಟೆಗೆ ಕಾರಣರಾಗಿದ್ದ ಮಂಗಳೂರು ಮೂಲದ ನಾಲ್ವರು ಕೈದಿಗಳನ್ನು ರಾಜ್ಯದ ಬೇರೆ ಬೇರೆ ಕಾರಾಗೃಹಗಳಿಗೆ ತಕ್ಷಣವೇ ಸ್ಥಳಾಂತರಿಸಲಾಗಿದೆ. ಮಂಗಳೂರು ಜೈಲಿನಿಂದ ಈ ನಾಲ್ವರನ್ನು ಕೇವಲ ಎರಡು ತಿಂಗಳ ಹಿಂದೆ ಕಾರವಾರಕ್ಕೆ ಸ್ಥಳಾಂತರಿಸಲಾಗಿತ್ತು. ಅವರೇ ಇಲ್ಲಿನ ಗಲಭೆಗಳಿಗೆ ಮುಖ್ಯ ಕಾರಣಕರ್ತರಾಗಿದ್ದರು. ಸದ್ಯ ಅವರನ್ನು ಬಳ್ಳಾರಿ ಮತ್ತು ಬೆಳಗಾವಿ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ.

