ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂದಿಖಾನೆ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ, ಡಿಜಿಪಿ ಅಲೋಕ್ ಕುಮಾರ್ ಅವರು ಇಂದು ನಗರದ ಕೇಂದ್ರ ಕಾರಾಗಾರವಾದ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿದರು.
ಜೈಲಿನ ಮುಖ್ಯ ಚೆಕ್‌ಪೋಸ್ಟ್‌ನಿಂದಲೇ ಮಾಹಿತಿ ಸಂಗ್ರಹಿಸಲು ಆರಂಭಿಸಿದ ಡಿಜಿಪಿ ಅವರು, ಹಿರಿಯ ಅಧಿಕಾರಿಗಳ ಜೊತೆಗೂಡಿ ಜೈಲಿನ ಸುತ್ತಮುತ್ತಲಿನ ಪ್ರದೇಶಗಳನ್ನು ಓಡಾಡಿ ಪರಿಶೀಲಿಸಿದರು. ಈ ವೇಳೆ, ಅವರು ಪ್ರತಿ ಬ್ಯಾರಕ್ಗೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.
ಬ್ಯಾರಕ್‌ಗಳಿಗೆ ಭೇಟಿ ನೀಡಿದ ಡಿಜಿಪಿ ಅಲೋಕ್ ಕುಮಾರ್ ಅವರು ಕೈದಿಗಳ ಜೊತೆ ನೇರವಾಗಿ ಸಂವಾದ ನಡೆಸಿದರು. ಊಟ, ತಿಂಡಿ ಮತ್ತು ಶೌಚಾಲಯದ ವ್ಯವಸ್ಥೆಗಳ ಬಗ್ಗೆ ವಿಚಾರಿಸಿದರು. ಜೈಲಿನೊಳಗೆ ಯಾವುದೇ ರೀತಿಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದಲ್ಲಿ ಅದನ್ನು ಕೂಡಲೇ ಸಿಬ್ಬಂದಿ ವಶಕ್ಕೆ ಒಪ್ಪಿಸುವಂತೆ ತಾಕೀತು ಮಾಡಿದರು. ಕಳ್ಳಾಟ ಅಥವಾ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮ ಎದುರಿಸಲು ಸಿದ್ಧರಾಗಿರಿ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.
ಜೈಲಿನೊಳಗೆ ಗಾಂಜಾ ಮತ್ತು ಬಿಡಿ ಸಿಗರೇಟ್‌ನಂತಹ ನಿಷಿದ್ಧ ವಸ್ತುಗಳ ಸಾಗಾಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಡಿಜಿಪಿ ಖಡಕ್ ಸೂಚನೆ ನೀಡಿದರು. “ಇನ್ನು ಮುಂದೆ ಗಾಂಜಾ, ಬಿಡಿ ಸಿಗರೇಟ್ ಸಿಗಬಾರದು. ಎಲ್ಲವೂ ಸಂಪೂರ್ಣವಾಗಿ ಬಂದ್ ಆಗಬೇಕು,” ಎಂದು ತಾಕೀತು ಮಾಡಿದರು.
ಡಿಜಿಪಿ ಅವರು ಜೈಲಿನ ಅಡುಗೆ ಮನೆ ಮತ್ತು ಆಸ್ಪತ್ರೆಗೂ ಭೇಟಿ ನೀಡಿದರು. ವೈದ್ಯರು ತಮ್ಮ ಕರ್ತವ್ಯವನ್ನು ಮಾತ್ರ ಮಾಡಬೇಕು. ಚಿಕಿತ್ಸೆ ನೀಡುವ ಬದಲಿಗೆ ಮೊಬೈಲ್ ಅಥವಾ ಗಾಂಜಾ ಸಾಗಾಟದಲ್ಲಿ ಭಾಗಿಯಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೇರವಾಗಿ ಎಚ್ಚರಿಕೆ ನೀಡಿದರು. ಅಡುಗೆ ಮನೆ ಸಿಬ್ಬಂದಿಗೂ ‘ಎಡಿಷನಲ್ ಆ್ಯಕ್ಟಿವಿಟಿಗಳು’ ನಿಲ್ಲಬೇಕು ಎಂದು ಸೂಚನೆ ನೀಡಿದರು.
ಜೈಲಿನ ಬೇಕರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಯೀಸ್ಟ್ ಅನ್ನು ಬಳಸಿ ವೈನ್ ತಯಾರಿಸಿದರೆ ಅದರ ವಿರುದ್ಧ ಕಠಿಣ ಮತ್ತು ವೈಲೆಂಟ್ ಆಗಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಿಜಿಪಿ ಅಲೋಕ್ ಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ, ಜೈಲಿನ ಆವರಣದಲ್ಲಿನ ಪಾರ್ಕಿಂಗ್ ಅವ್ಯವಸ್ಥೆ ಬಗ್ಗೆ ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. “ಇಷ್ಟು ಜಾಗವಿದ್ದರೂ ಯಾಕೆ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ? ಜಾಗವನ್ನು ಸ್ವಚ್ಛ ಮಾಡಿ ವಾಹನಗಳ ಪಾರ್ಕಿಂಗ್‌ಗೆ ಸರಿಯಾದ ಕ್ರಮ ಕೈಗೊಳ್ಳಿ” ಎಂದು ಸೂಚನೆ ನೀಡಿದರು.
ಸುಮಾರು 50ಕ್ಕೂ ಹೆಚ್ಚು ಅಧಿಕಾರಿಗಳೊಂದಿಗೆ ಡಿಜಿಪಿ ಅವರು ಜೈಲಿನ ಸುತ್ತು ಹಾಕಿದ್ದು, ಐಜಿಪಿ ದಿವ್ಯಾ, ಡಿಸಿಪಿ ನಾರಾಯಣ, ಮುಖ್ಯ ಅಧೀಕ್ಷಕ ಅಂಶುಕುಮಾರ್, ಕಮಾಂಡರ್ ವೀರೇಶ್ ಕುಮಾರ್, ಸಹಾಯಕ ಕಮಾಂಡರ್ ಮಾದೇಶ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

