ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ರಾಜಧಾನಿ ದೆಹಲಿಯು ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಈ ವರ್ಷ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು ಜಾಗತಿಕ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಉಸಿರಾಡಲು ಕೂಡ ಕಷ್ಟವಾಗುವಷ್ಟು ಮಾಲಿನ್ಯ ಹೆಚ್ಚಾಗಿರುವುದರಿಂದ, ಯುನೈಟೆಡ್ ಕಿಂಗ್‌ಡಮ್, ಸಿಂಗಾಪುರ ಮತ್ತು ಕೆನಡಾ ದೇಶಗಳು ಉತ್ತರ ಭಾರತಕ್ಕೆ ಪ್ರಯಾಣಿಸುವ ತಮ್ಮ ನಾಗರಿಕರಿಗೆ ನಿರ್ದಿಷ್ಟ ಪ್ರಯಾಣ ಸಲಹೆಗಳನ್ನು ನೀಡುವ ಮೂಲಕ ಗಮನ ಸೆಳೆದಿವೆ.
ಮಾಲಿನ್ಯದೊಂದಿಗೆ ದಟ್ಟವಾದ ಮಂಜು ಆವರಿಸಿರುವ ಕಾರಣ ದೆಹಲಿಯಲ್ಲಿ ಗೋಚರತೆಯ ಸಮಸ್ಯೆ ಉಂಟಾಗಿದೆ. ಇದರಿಂದ ವಿಮಾನಗಳ ಹಾರಾಟದಲ್ಲಿ ವಿಳಂಬ ಮತ್ತು ಅಡಚಣೆಗಳು ಸಾಮಾನ್ಯವಾಗಿದೆ. ಪ್ರಯಾಣಿಕರು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆಗಳು ನೀಡುವ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು, ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರುವಂತೆ ಸಿಂಗಾಪುರವು ತನ್ನ ಪ್ರಜೆಗಳಿಗೆ ಸೂಚಿಸಿದೆ.
ಸಿಂಗಾಪುರವು ದೆಹಲಿಯ ಇತ್ತೀಚಿನ ನಿರ್ಬಂಧಗಳ ಬಗ್ಗೆಯೂ ತನ್ನ ಪ್ರಜೆಗಳಿಗೆ ಮಾಹಿತಿ ನೀಡಿದೆ. ದೆಹಲಿ ಸರ್ಕಾರವು ನಿರ್ಮಾಣ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ನಿಷೇಧಿಸಿದ್ದು, ಶಾಲೆಗಳು ಮತ್ತು ಕಚೇರಿಗಳಿಗೆ ಹೈಬ್ರಿಡ್ (ಆನ್‌ಲೈನ್ ಮತ್ತು ಆಫ್‌ಲೈನ್) ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದೆ. ವಿಶೇಷವಾಗಿ ಮಕ್ಕಳು, ಹಾಗು ಉಸಿರಾಟದ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವವರು ಮನೆಯೊಳಗೆ ಇರಲು ಮತ್ತು ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲು ಅಧಿಕಾರಿಗಳು ನೀಡಿದ ಸೂಚನೆಗಳನ್ನು ಪಾಲಿಸುವಂತೆ ಸಿಂಗಾಪುರ ತನ್ನ ನಾಗರಿಕರಿಗೆ ತಿಳಿಸಿದೆ.
ಈ ಹಿಂದೆ, ಯುನೈಟೆಡ್ ಕಿಂಗ್‌ಡಮ್ ಕೂಡ ತನ್ನ ಪ್ರಜೆಗಳಿಗೆ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಸಲಹೆಯನ್ನು ನೀಡಿತ್ತು. ಗರ್ಭಿಣಿಯರು ಮತ್ತು ಹೃದಯ ಕಾಯಿಲೆ ಇರುವ ಜನರು ಭಾರತಕ್ಕೆ ಪ್ರಯಾಣಿಸುವ ಮೊದಲು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅದು ಹೇಳಿದೆ. ಅಕ್ಟೋಬರ್‌ನಿಂದ ಫೆಬ್ರವರಿವರೆಗಿನ ಚಳಿಗಾಲದ ಅವಧಿಯಲ್ಲಿ ಉತ್ತರ ಭಾರತದ ರಾಜ್ಯಗಳು ತೀವ್ರ ವಾಯು ಮಾಲಿನ್ಯಕ್ಕೆ ಒಳಗಾಗುತ್ತವೆ. ಈ ಪರಿಸ್ಥಿತಿಯು ಮಕ್ಕಳು, ವೃದ್ಧರು ಮತ್ತು ಪೂರ್ವ ಅಸ್ತಿತ್ವದಲ್ಲಿರುವ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುವ ಜನರ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು UK ಎಚ್ಚರಿಸಿದೆ.
ಅದೇ ರೀತಿ, ಕೆನಡಾ ಸರ್ಕಾರವು ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರು ನಿಯಮಿತವಾಗಿ ಗಾಳಿಯ ಗುಣಮಟ್ಟದ ಮಟ್ಟವನ್ನು ಪರಿಶೀಲಿಸುವಂತೆ ಸಲಹೆ ನೀಡಿದೆ. ದೆಹಲಿಯು ಪ್ರತಿ ಚಳಿಗಾಲದಲ್ಲಿ ಅತ್ಯಂತ ಕೆಟ್ಟ ವಾಯು ಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದೆ ಎಂಬುದನ್ನು ಅದು ಎತ್ತಿ ತೋರಿಸಿದೆ.

