Tuesday, December 16, 2025

ನಕಲಿ ಔಷಧ ಜಾಲ ಭೇದಿಸಿದ ದೆಹಲಿ ಕ್ರೈಂ ಬ್ರಾಂಚ್: 2.3 ಕೋಟಿ ಮೌಲ್ಯದ ಸೊತ್ತು ವಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೋಗಿಗಳ ಆರೋಗ್ಯದ ಮೇಲೆ ಗಂಭೀರ ಅಪಾಯ ಬೀರುತ್ತಿದ್ದ ನಕಲಿ ಔಷಧ ಜಾಲವೊಂದನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗವು ಯಶಸ್ವಿಯಾಗಿ ಭೇದಿಸಿದೆ. ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಹಲವು ತಿಂಗಳುಗಳಿಂದ ಸಕ್ರಿಯವಾಗಿದ್ದ ಈ ಸಂಘಟಿತ ದಂಧೆಯ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ, ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಸದರ್ ಬಜಾರ್‌ನ ತೆಲಿವಾರಾ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಸುಮಾರು 2.3 ಕೋಟಿ ರೂಪಾಯಿ ಮೌಲ್ಯದ ನಕಲಿ ಮುಲಾಮುಗಳು ಪತ್ತೆಯಾಗಿವೆ. ಚರ್ಮ ರೋಗಗಳಿಗೆ ಬಳಸುವ ಬೆಟ್ನೋವೇಟ್ ಸಿ ಮತ್ತು ಕ್ಲೋಬ್ ಜಿ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಈ ಸಂಬಂಧ ಗೌರವ್ ಭಗತ್ ಮತ್ತು ವಿಶಾಲ್ ಗುಪ್ತಾ ಎಂಬ ಇಬ್ಬರನ್ನು ಕ್ರೈಂ ಬ್ರಾಂಚ್ ಬಂಧಿಸಿದೆ. ವಿಚಾರಣೆಯ ವೇಳೆ, ಗಾಜಿಯಾಬಾದ್‌ನ ಲೋನಿ ಪ್ರದೇಶದಲ್ಲಿ ಅಕ್ರಮ ಕಾರ್ಖಾನೆ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭಿಸಿದ್ದು, ತಕ್ಷಣವೇ ಅಲ್ಲಿಗೂ ದಾಳಿ ನಡೆಸಲಾಗಿದೆ.

ಈ ದಾಳಿಯಲ್ಲಿ 5,400 ನಕಲಿ ಮುಲಾಮು ಟ್ಯೂಬ್‌ಗಳು, ಸಾವಿರಾರು ಖಾಲಿ ಟ್ಯೂಬ್‌ಗಳು, 350 ಕೆಜಿ ಕಚ್ಚಾ ವಸ್ತುಗಳು ಹಾಗೂ ಉತ್ಪಾದನಾ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಲೋನಿಯಲ್ಲಿ ತಯಾರಿಸಿದ ನಕಲಿ ಔಷಧಿಗಳನ್ನು ದೆಹಲಿಯ ಮೂಲಕ ದೇಶದ ವಿವಿಧ ಭಾಗಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!