ಹೊಸದಿಗಂತ ಡಿಜಿಟಲ್ ಡೆಸ್ಕ್:
ನಕ್ಸಲ್ ಚಟುವಟಿಕೆಗಳು ಮುಂದುವರಿದಿರುವ ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಮತ್ತೊಮ್ಮೆ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆದಿದೆ. ಬಿಜಾಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲರು ನೆಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡ ಪರಿಣಾಮ ಸಿಆರ್‌ಪಿಎಫ್‌ನ ಕೋಬ್ರಾ ಘಟಕದ ಇಬ್ಬರು ಕಮಾಂಡೋಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ ಫರ್ಸೆಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ತೆರಳಿದ್ದ ಭದ್ರತಾ ಪಡೆಗಳ ಜಂಟಿ ತಂಡ ಈ ಘಟನೆಗೆ ತುತ್ತಾಗಿದೆ. ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ಕೋಬ್ರಾ ಸಿಬ್ಬಂದಿ ಸೇರಿಕೊಂಡು ಅರಣ್ಯ ಪ್ರದೇಶದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಫರ್ಸೆಗಢ–ಪಿಲ್ಲೂರ್ ಕಂಡ್ಲಪರ್ತಿಯ ಕಾಡಿನಲ್ಲಿ ಅಡಗಿಸಿದ್ದ ಐಇಡಿ ಸ್ಫೋಟಗೊಂಡಿದೆ. ಈ ಸ್ಫೋಟದಲ್ಲಿ ಇಬ್ಬರು ಕೋಬ್ರಾ ಸಿಬ್ಬಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.
ಗಾಯಗೊಂಡ ಕಮಾಂಡೋಗಳನ್ನು ತಕ್ಷಣ ರಾಯ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ಕಾರ್ಯಾಚರಣೆ ಮುಂದುವರಿದಿದ್ದು, ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯ ತೀವ್ರಗೊಳಿಸಿವೆ.

