ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಅಂತೆಯೇ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಆಸೀಫ್ ಸೇಠ್ ಗೆಲುವಿನ ಬೆನ್ನಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೇಳಿ ಬಂದಿದೆ. ಕೈ ಅಭ್ಯರ್ಥಿ ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡ ಕೆಲ ಕಿಡಿಗೇಡಿಗಳು ʻಪಾಕಿಸ್ತಾನ್ ಜಿಂದಾಬಾದ್ʼ ಘೋಷಣೆ ಕೂಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಶನಿವಾರ ಆಸೀಫ್ ಸೇಠ್ ಗೆಲುವು ಖಚಿತವಾಗುತ್ತಿದ್ದಂತೆ ಅಪಾರ ಸಂಖ್ಯೆಯ ಬೆಂಬಲಿಗರು ಸೇರಿ ಪಟಾಕಿ ಹೊಡೆದು ಸಂಭ್ರಮಾಚರಣೆ ನಡೆಸಿದ್ದಾರೆ. ಇದೇ ವೇಳೆ ಹಾಡು, ನೃತ್ಯ, ಬಣ್ಣದೋಕುಳಿ ಸಹ ನಡೆದಿದೆ. ಸುತ್ತ ಕಾಂಗ್ರೆಸ್ ಧ್ವಜವನ್ನು ಹಿಡಿದು ಜಿಂದಾಬಾದ್ ಘೋಷಣೆ ವೇಳೆ ಕೆಲ ಕಿಡಿಗೇಡಿ ಯುವಕರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ.
ಕೂಡಲೇ ಅಲ್ಲಿದ್ದ ಪೊಲೀಸರು ಯುವಕರ ಬಳಿ ಹೋಗಿ ಈ ರೀತಿ ವರ್ತನೆ ಸರಿಯಲ್ಲ, ಮತ್ತೊಮ್ಮೆ ಈ ಕೂಗು ಕೇಳಿಸಿದರೆ, ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ತಾಕೀತು ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ಭುಗಿಲೆದ್ದಿದೆ. ಕಾಂಗ್ರೆಸ್ ಗೆಲುವಿನಲ್ಲಿ ಇಂತಹ ದೇಶದ್ರೋಹಿ ಘೋಷಣೆ ಕೂಗುವುದು ಸಮಂಜಸವಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹ ವ್ಯಕ್ತವಾಗಿದೆ.