ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಸಿರಾಡಲೂ ಕಷ್ಟವಾಗುವ ಮಟ್ಟಿಗೆ ದೆಹಲಿಯ ವಾಯುಮಾಲಿನ್ಯ ತೀವ್ರಗೊಂಡಿರುವ ಹಿನ್ನೆಲೆ, ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಹೆಚ್ಚಾಗಿದೆ. ಈ ಪರಿಸ್ಥಿತಿಯ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ನರ್ಸರಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಆನ್‌ಲೈನ್ ತರಗತಿಗಳನ್ನು ನಡೆಸಲು ಆದೇಶ ಹೊರಡಿಸಿದೆ.
ಇದುವರೆಗೆ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದೋ ಅಥವಾ ಆನ್‌ಲೈನ್ ತರಗತಿ ಆಯ್ಕೆಮಾಡುವುದೋ ಎಂಬ ಸ್ವಾತಂತ್ರ್ಯ ನೀಡಲಾಗಿತ್ತು. ಆದರೆ ಪ್ರಸ್ತುತ ವಾಯು ಗುಣಮಟ್ಟ ತೀವ್ರ ಹಂತ ತಲುಪಿರುವುದರಿಂದ, ಆ ಆಯ್ಕೆಯನ್ನು ಹಿಂತೆಗೆದುಕೊಳ್ಳಲಾಗಿದೆ. ದೆಹಲಿ ಶಿಕ್ಷಣ ನಿರ್ದೇಶನಾಲಯ ಹೊರಡಿಸಿರುವ ವೃತ್ತಪತ್ರಿಕೆಯಲ್ಲಿ, ಮುಂದಿನ ಆದೇಶ ಬರುವವರೆಗೆ ನರ್ಸರಿ ರಿಂದ 5ನೇ ತರಗತಿವರೆಗಿನ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಮಾನ್ಯತೆ ಪಡೆದ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಮಾತ್ರ ನಡೆಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಉಳಿದ ತರಗತಿಗಳಿಗೆ ಈ ಹಿಂದೆ ನೀಡಿರುವ ಮಾರ್ಗಸೂಚಿಗಳಂತೆ ಪಾಠಗಳು ನಡೆಯಲಿವೆ.

