ಹೊಸ ದಿಗಂತ ಡಿಜಿಟಲ್ ಡೆಸ್ಕ್:
‘ದಿ ಕೇರಳ ಸ್ಟೋರಿ’ ಚಿತ್ರದ ಪ್ರದರ್ಶನ ನಿಷೇಧಿಸಿ ಪಶ್ಚಿಮ ಬಂಗಾಳ ಸರ್ಕಾರ ಮೇ 8ರಂದು ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಎಲ್ಲ ಥಿಯೇಟರ್ಗಳಿಗೂ ಸೂಕ್ತ ಭದ್ರತೆ ನೀಡಬೇಕು. ಈ ಮೂಲಕ ಅಲ್ಲಿನ ಜನರು ನಿರಾಳವಾಗಿ ಸಿನಿಮಾ ನೋಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ.
ಕೇರಳ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಅಫ್ಘಾನಿಸ್ತಾನ ಮತ್ತು ಸಿರಿಯಾಕ್ಕೆ ಕರೆದುಕೊಂಡು ಹೋಗಿ ಇಸ್ಲಾಮ್ಗೆ ಮತಾಂತರ ಮಾಡಿ, ಐಸಿಸ್ಗೆ ಸೇರ್ಪಡೆಗೊಳಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾವನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಿ, ಮಮತಾ ಬ್ಯಾನರ್ಜಿ ಅವರು ಮೇ 8ರಂದು ಆದೇಶ ಹೊರಡಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಬ್ಯಾನ್ ಮಾಡಿದ್ದನ್ನು ಪ್ರಶ್ನಿಸಿ ಚಿತ್ರ ನಿರ್ಮಾಪಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೆ ಕಾಂಗ್ರೆಸ್, ಇತರ ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್ಗಳಿಗೆ, ಸುಪ್ರೀಂಕೋರ್ಟ್ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಬಿಡುಗಡೆಯಾಗಿತ್ತು. ಅದಾದ ಮೇಲೆ ಮಮತಾ ಬ್ಯಾನರ್ಜಿ ಈ ಸಿನಿಮಾ ಬಗ್ಗೆ ಕಿಡಿಕಾರಿ, ಮೇ 8ರಂದು ಪ್ರದರ್ಶನ ನಿಷೇಧಿಸಿದ್ದರು.