ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಾನು ಕಳೆದ 6 ತಿಂಗಳಿಂದ ಶ್ರಮಪಟ್ಟು ಕೆಲಸ ಮಾಡಿದ್ದೇನೆ. ಆದರೆ ನನ್ನ ನಿರೀಕ್ಷೆ ಹುಸಿಯಾಗಿದೆ, ಮಾಧ್ಯಮಗಳ ನಿರೀಕ್ಷೆ ನಿಜವಾಗಿದೆ. ಮುಂದಿನ ದಿನಗಳಲ್ಲಿ ನಾವು ಕಾರ್ಯಕರ್ತರ ಜೊತೆ ನಿಲ್ಲುತ್ತೇವೆ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಹೀನಾಯ ಸೋಲು ವಿಚಾರವಾಗಿ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಹೆಚ್ಡಿ ದೇವೇಗೌಡ 2 ಬಾರಿ ಸೋತ ಬಳಿಕವೂ ಜೆಡಿಎಸ್ ಅಧಿಕಾರಕ್ಕೆ ಬಂದಿತ್ತು. ಮುಂದಿನ ದಿನಗಳಲ್ಲಿ ಜನ ಮತ್ತೆ ಜೆಡಿಎಸ್ ಬೇಕು ಅಂತಾ ಬಯಸುತ್ತಾರೆ ಎಂದು ಹೇಳಿದರು.
ಪಂಚರತ್ನ ಯೋಜನೆಗಳು ರಾಜ್ಯದ ಜನರಿಗೆ ಇಷ್ಟವಾಗಿಲ್ಲ ಅನ್ಸುತ್ತೆ. ಕಾಂಗ್ರೆಸ್ನ ಗ್ಯಾರಂಟಿಗಳನ್ನು ನಂಬಿ ರಾಜ್ಯದ ಜನ ಮತ ಹಾಕಿದ್ದಾರೆ. ಈ ರೀತಿಯ ಫಲಿತಾಂಶ ನಮ್ಮ ಪಕ್ಷಕ್ಕೆ ಹೊಸದೇನಲ್ಲ ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸೋಲು ವಿಚಾರವಾಗಿ ಮಾತನಾಡಿ, ಅದು ಮುಗಿದ ಅಧ್ಯಾಯ, ಅದರ ಬಗ್ಗೆ ಚರ್ಚೆ ಬೇಡ. ಚುನಾವಣೆಯಲ್ಲಿ ಘಟಾನುಘಟಿ ನಾಯಕರೇ ಸೋತಿದ್ದಾರೆ. ವಾಜಪೇಯಿ, ಕೆಸಿಆರ್ ಮೊದಲನೇ ಚುನಾವಣೆಯಲ್ಲಿ ಸೋತಿದ್ದಾರೆ. ಇಂದು ಸೋತಿರಬಹುದು, ಮುಂದಿನ ದಿನಗಳಲ್ಲಿ ಅವರನ್ನು ಬೆಳೆಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳು ಕೊಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ನೋಡೋಣ, ನಮಗಿಂತ ಅವರು ದೊಡ್ಡವರಲ್ವೆ. ಎಲ್ಲಾ ಲೆಕ್ಕಾಚಾರ ಮಾಡೇ ಸ್ಕೀಂ ಮಾಡಿರುತ್ತಾರೆ. ಮೊದಲು ಫ್ರೀ ಅಂತ ಹೇಳಿ ಈಗ ಕೆಲವೊಂದು ಷರತ್ತು ಹಾಕುತ್ತಿದ್ದಾರೆ. ನೋಡೊಣ ಮುಂದೆ ಏನ್ ಮಾಡುತ್ತಾರೆ ಎಂದು ಹೇಳಿದರು.