ಹೊಸ ದಿಗಂತ ವರದಿ, ಹುಬ್ಬಳ್ಳಿ:
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಸಿಎಂ ಪಟ್ಟ ಅಲಂಕರಿಸುವ ಮುನ್ನವೇ ಲಿಂಗಾಯತರ ಹೋರಾಟ ಮತ್ತೆ ಮುನ್ನೆಲೆಗೆ
ಬಂದಿದ್ದು, ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಯ ಪ್ರಸ್ತಾಪ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಲಿಂಗಾಯತ ಮಹಾಸಭಾ ಆಗ್ರಹಿಸಿದೆ.
ಈ ಕುರಿತು ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ. ಜಾಮದಾರ ಮಾತನಾಡಿ, ಪ್ರತ್ಯೇಕ ಲಿಂಗಾಯತ ಹೋರಾಟ ನಿಂತಿಲ್ಲ. ಮುಂದುವರಿದಿದೆ. ಸದ್ಯ ರಾಜಕೀಯೇತರ ಸಂಸ್ಥೆಯಾಗಿದೆ ಹೋರಾಟ ಮಾಡುತ್ತಿದೆ ಎಂದರು.
ಹಿಂದೆ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಪ್ರಸ್ತಾಪ ಕಳಹಿಸಿದಾಗ ಮೂರು ಸುಳ್ಳು ಕಾರಣ ನೀಡಿ ನಮ್ಮ ಬೇಡಿಕೆ ತಿರಸ್ಕರಿಸಲಾಗಿತ್ತು. ಆದರೆ ಇದಕ್ಕೆ ಸಂಬಂಸಿದ ಸಾಕ್ಷಿಗಳನ್ನು ನಾವು ನೀಡುತ್ತೇವೆ. ಸರ್ಕಾರ ಇದನ್ನು ಪರಿಗಣನೆಗೆ ತೆಗೆದುಕೊಂಡು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಇನ್ನೂ ಉಪಮುಖ್ಯಮಂತ್ರಿ ಆಗಲೂ ಹೊರಟಿರುವ ಡಿ.ಕೆ.ಶಿವಕುಮಾರ ಅಕಾರದ ಆಸೆಗಾಗಿ ಸಮಸ್ತ ಲಿಂಗಾಯತ ಸಮಾಜ ಸ್ವಾಮೀಜಿ ನಮ್ಮ ಪರವಾಗಿದ್ದಾರೆ ಎಂದು ಹೇಳಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಅವರ ಹಿಂದೆ ಇರುವುದು ಕೇವಲ ವೀರಶೈವದ ಸ್ವಾಮೀಜಿಗಳು ಮಾತ್ರ. ಈ ಹೇಳಿಕೆ ನೀಡುವ ಮೂಲಕ ಧರ್ಮ ವಿಭಜನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನೂ ಉಪಮುಖ್ಯಮಂತ್ರಿ ಸ್ಥಾನ ಒಂದೇ ಇರಬೇಕು ಎಂದು ಡಿ.ಕೆ.ಶಿವಕುಮಾರ ಹಠ ಹಿಡಿದಿದ್ದಾರೆ. ಇದು ಯಾಕೆ? ಲಿಂಗಾಯತ ಸಮುದಾಯದಲ್ಲಿ ಪ್ರಬಲ ನಾಯಕರು ಯಾರು ಇಲ್ವಾ? ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ೩೯ ಕ್ಕೂ ಹೆಚ್ಚು ಲಿಂಗಾಯತರು ಶಾಸಕರು ಆಯ್ಕೆಯಾಗಿದ್ದಾರೆ. ಅದರಲ್ಲಿ ಯಾರಿಗಾದರೂ ಡಿಸಿಎಂ ಸ್ಥಾನ ನೀಡಬೇಕಿತ್ತು. ಆದರೆ ಡಿ.ಕೆ. ಶಿವುಕುಮಾರ ಅವರು ಒಬ್ಬರೇ ಡಿಸಿಎಂ ಇರಬೇಕು ಎಂಬುದರ ಒಳ ಅರ್ಥ ಏನೆಂಬುದು ಸ್ಪಷ್ಟ ಪಡಿಸಬೇಕು ಎಂದರು.
ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಲಿಂಗಾಯತರ ಕಡೆಗಣಿಸಿದ್ದರಿಂದ ಬಿಜೆಪಿಗೆ ಸದ್ಯ ಈ ಸ್ಥಿತಿ ಎದುರಾಗಿದೆ. ಕಾಂಗ್ರೆಸ್ ಸಹ ಅದೇ ದಾರಿಯಲ್ಲಿ ಸಾಗುವ ಲಕ್ಷಣ ಕಾಣುತ್ತಿದ್ದು, ನಿಮಗೂ ಸಹ ಇದೆ ಪರಿಸ್ಥಿತಿ ಬರಲಿದೆ. ಸಾಮಾಜಿಕವಾಗಿ ಎಲ್ಲರಿಗೂ ಸಮಾನ ಸ್ಥಾನ ಸಿಗಬೇಕು ಹಾಗೂ ಅರ್ಹರಿಗೆ ಸಚಿವ ಸ್ಥಾನ ಎಂಬುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.