ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣ್ ಕುಮಾರ್ ಪುತ್ತಿಲ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬೆಂಬಲಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ದೃಷ್ಟಿಯಿಂದ ಭಾನುವಾರ ಹಮ್ಮಿಕೊಳ್ಳಲಾದ ‘ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ’ ಪಾದಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪುತ್ತಿಲ ಅವರ ಬೆಂಬಲಿಗರು ಪಾಲ್ಗೊಂಡರು.
ಭಾನುವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆ ವೃತ್ತದಿಂದ ಮಹಾಲಿಂಗೇಶ್ವರನಿಗೆ ಪ್ರಾರ್ಥನೆ ಮಾಡಿ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಆರಂಭಗೊಂಡಿತು. ಕಾರ್ಯಕರ್ತರು ಕೇಸರಿ ಶಾಲು ಧರಿಸಿ ನಾಲ್ಕು ಸಾಲುಗಳಲ್ಲಿ ಶಿಸ್ತುಬದ್ಧವಾಗಿ ಮಹಾಲಿಂಗೇಶ್ವರ ದೇವಾಲಯದ ಕಡೆಗೆ ಸಾಗಿದರು.
ಮೊದಲೇ ಸೂಚಿಸಿದಂತೆ ಶ್ರೀ ಮಹಾಲಿಂಗೇಶ್ವರನ ಘೋಷನೆಗಳನ್ನು, ಭಜನೆಗಳನ್ನು ಮಾತ್ರ ಕಾರ್ಯಕರ್ತರು ಹಾಡಿದರು. ಅರುಣ್ ಕುಮಾರ್ ಪುತ್ತಿಲ ಸಹಿತ ನೂರಾರು ಮಂದಿ ಬರಿಗಾಲಿನಲ್ಲಿ ಸುಮಾರು ೨ ಕಿ.ಮೀ. ಸಾಗಿದ್ದು ವಿಶೇಷವಾಗಿತ್ತು.