ಇಂದಿನ ದಿನಗಳಲ್ಲಿ ಮೇಕಪ್ ಎನ್ನುವುದು ಕೇವಲ ಸೌಂದರ್ಯವರ್ಧನೆಗೆ ಸೀಮಿತವಾಗಿಲ್ಲ, ಅದು ಆತ್ಮವಿಶ್ವಾಸದ ಭಾಗವೂ ಆಗಿದೆ. ಕಾಲೇಜು ವಿದ್ಯಾರ್ಥಿನಿಯರಿಂದ ಉದ್ಯೋಗದಲ್ಲಿರುವ ಮಹಿಳೆಯರ ತನಕ ಬಹುತೇಕರು ದಿನನಿತ್ಯ ಕಣ್ಣಿನ ಅಂದ ಹೆಚ್ಚಿಸಲು ಕಾಜಲ್ ಹಾಗೂ ಐಲೈನರ್ ಬಳಸುತ್ತಾರೆ. ಆದರೆ ಈ ಸಣ್ಣ ಅಭ್ಯಾಸವೇ ದೀರ್ಘಕಾಲದಲ್ಲಿ ಕಣ್ಣುಗಳ ಆರೋಗ್ಯಕ್ಕೆ ಗಂಭೀರ ಹಾನಿ ಮಾಡಬಹುದು ಎಂಬುದನ್ನು ಹಲವರು ಗಮನಿಸುವುದಿಲ್ಲ.

ತಜ್ಞರ ಪ್ರಕಾರ ಕಾಜಲ್ ಮತ್ತು ಐಲೈನರ್ ನೇರವಾಗಿ ಕಣ್ಣುಗಳ ಸಂಪರ್ಕಕ್ಕೆ ಬರುವುದರಿಂದ ಅವುಗಳ ದೈನಂದಿನ ಬಳಕೆ ಅಪಾಯಕಾರಿಯಾಗಬಹುದು. ಅವಧಿ ಮೀರಿದ ಉತ್ಪನ್ನಗಳು ಅಥವಾ ಸರಿಯಾಗಿ ಸ್ವಚ್ಛಗೊಳಿಸದ ಕಾಸ್ಮೆಟಿಕ್ಸ್ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರ ಸೋಂಕಿಗೆ ಕಾರಣವಾಗುತ್ತವೆ. ಇದರಿಂದ ಕಣ್ಣುಗಳಲ್ಲಿ ಕೆಂಪು, ತುರಿಕೆ, ನೀರು ಬರುವುದು ಮತ್ತು ಉರಿಯೂತದ ಸಮಸ್ಯೆಗಳು ಹೆಚ್ಚಾಗುತ್ತವೆ.

ಕಾಜಲ್ ಹಾಗೂ ಐಲೈನರ್‌ನಲ್ಲಿರುವ ಕೆಲವು ರಾಸಾಯನಿಕಗಳು ಕಣ್ಣಿನ ಸೂಕ್ಷ್ಮ ಭಾಗಗಳಿಗೆ ಕಠಿಣವಾಗಿರುತ್ತವೆ. ಇವು ನಿರಂತರ ಬಳಕೆಯಿಂದ ಕಣ್ಣಿನ ಮೇಲ್ಮೈ ಮತ್ತು ರೆಪ್ಪೆಗೂದಲು ಕೋಶಕಗಳಲ್ಲಿ ಸಂಗ್ರಹವಾಗಿ ಕಾರ್ನಿಯಾಗೆ ಹಾನಿ ಮಾಡಬಹುದು. ಇದರ ಪರಿಣಾಮವಾಗಿ ರೆಪ್ಪೆಗೂದಲು ಉದುರುವುದು ಮತ್ತು ದೃಷ್ಟಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯಕೀಯ ವರದಿಗಳು ಸೂಚಿಸುತ್ತವೆ.

ಕಣ್ಣಿನ ತೊಂದರೆ ತಡೆಗಟ್ಟುವ ದೃಷ್ಟಿಯಿಂದ ಗುಣಮಟ್ಟದ ಬ್ರ್ಯಾಂಡ್ ಉತ್ಪನ್ನಗಳನ್ನು ಮಾತ್ರ ಬಳಸುವುದು, ಅವುಗಳನ್ನು ಪ್ರತಿದಿನ ರಾತ್ರಿ ಸರಿಯಾಗಿ ತೆಗೆಯುವುದು ಬಹಳ ಮುಖ್ಯ. ಸಮಸ್ಯೆ ಕಂಡುಬಂದರೆ ತಕ್ಷಣ ಬಳಕೆ ನಿಲ್ಲಿಸಿ ವೈದ್ಯರ ಸಲಹೆ ಪಡೆಯಬೇಕು. ವಾಟರ್‌ಫ್ರೂಫ್ ಲೈನರ್ ಬಳಸುವಾಗಲೂ ವಿಶೇಷ ಮೇಕಪ್ ರಿಮೂವರ್ ಬಳಸಿ ಸ್ವಚ್ಛಗೊಳಿಸುವುದು ಕಣ್ಣಿನ ಆರೋಗ್ಯಕ್ಕೆ ಉತ್ತಮ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

