ಹೊಸದಿಗಂತ ವರದಿ, ಅಂಕೋಲಾ:
ಆತ್ಮ ನಿರ್ಭರ ಭಾರತದ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸುವ ದಿಶೆಯಲ್ಲಿ ಸ್ವದೇಶದಲ್ಲಿ ನಿರ್ಮಿಸಲ್ಪಟ್ಟ ವಿಮಾನ ವಾಹಕ ಯುಧ್ಧ ನೌಕೆ ಐಎನ್ಎಸ್ ವಿಕ್ರಾಂತ ಕದಂಬ ನೌಕಾನೆಲೆಯ ತಟದಲ್ಲಿ ಯಶಸ್ವಿಯಾಗಿ ಬಂದು ನಿಂತಿದ್ದು ಏಷ್ಯಾದ ಅತಿ ದೊಡ್ಡ ನೌಕಾನೆಲೆಗೆ ವಿಕ್ರಾಂತ್ ಆಗಮನ ನೌಕಾಪಡೆ ಅಧಿಕಾರಿಗಳ ಹೆಮ್ಮೆಗೆ ಕಾರಣವಾಗಿದೆ.
ಸುಮಾರು 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕೊಚ್ಚಿಯ ಹಡಗು ಕಾರ್ಖಾನೆಯಲ್ಲಿ ದೇಶದ ಅತಿ ದೊಡ್ಡ ನೌಕೆಯ ನಿರ್ಮಾಣ ಕಾಮಗಾರಿಯನ್ನು ಮಾಡಲಾಗಿದ್ದು ವಿಕ್ರಾಂತ ನೌಕೆಯ ನಿರ್ಮಾಣದಿಂದಾಗಿ ಸ್ವದೇಶಿ ತಂತ್ರಜ್ಞಾನ ಬಳಸಿ ನೌಕೆಯ ನಿರ್ಮಾಣದಿಂದಾಗಿ ಅಮೇರಿಕಾ, ರಷ್ಯಾ, ಚೀನಾ, ಇಟಲಿ,ಫ್ರಾನ್ಸ್ ಮತ್ತು ಇಂಗ್ಲೆಂಡ್ ನಂಥ ಸಾಧಕ ರಾಷ್ಟ್ರಗಳ ಸಾಲಿನಲ್ಲಿ ಭಾರತ ಗುರುತಿಸಿಕೊಳ್ಳುವಂತಾಗಿತ್ತು.
ಸುಮಾರು 262 ಮೀಟರ್ ಉದ್ದ ರನ್ ವೇ ಹೊಂದಿರುವ ವಿಕ್ರಾಂತ್ 62 ಮೀಟರ್ ಅಗಲ, 59 ಮೀಟರ್ ಎತ್ತರವಿದ್ದು 2400 ವಿಭಾಗ ಹೊಂದಿರುವ 18 ಮಹಡಿಗಳನ್ನು ಹೊಂದಿದೆ.
ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಕೊಡುಗೆ ನೀಡುವ ಉದ್ದೇಶದಿಂದ ನಿರ್ಮಿಸಲಾದ ಕದಂಬ ನೌಕಾನೆಲೆಯಲ್ಲಿ ಇದೀಗ 6 ಜೆಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು ಎರಡು ಜಟ್ಟಿಗಳಲ್ಲಿ ದೇಶದ ಅತಿದೊಡ್ಡ ಯುದ್ದ ಹಡಗುಗಳು ನಿಲ್ಲಲು ಅವಕಾಶ ಇದ್ದು ಕೊಚ್ಚಿಯಿಂದ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸುತ್ತ ಬಂದಿರುವ ವಿಕ್ರಾಂತ ಯುದ್ದ ವಿಮಾನ ವಾಹಕ ಕದಂಬ ನೌಕಾನೆಲೆಯಲ್ಲಿ ಪರೀಕ್ಷಾರ್ಥವಾಗಿ ಬಂದು ನಿಂತಿದ್ದು ಮುಂದಿನ ಒಂದು ತಿಂಗಳುಗಳ ಕಾಲ ಇರಲಿದೆ ಎಂದು ತಿಳಿದು ಬಂದಿದೆ.
ಐ.ಎನ್. ಎಸ್ ವಿಕ್ರಾಂತ್ ಆತ್ಮನಿರ್ಭರ ಭಾರತ ಯೋಜನೆಯಲ್ಲಿ ನೌಕಾಸೆನೆಯ ಬಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನೌಕಾನೆಲೆ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.