ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದ ಬಿಬಿಸಿಗೆ ದೆಹಲಿ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.
ಸಾಕ್ಷ್ಯಚಿತ್ರದಿಂದಾಗಿ ದೇಶದ ಘನತೆಗೆ ಧಕ್ಕೆಯುಂಟಾಗಿದೆ. ಇದರ ಮೂಲಕ ಪ್ರಧಾನಿ ಮೋದಿ ಹಾಗೂ ದೇಶದ ನ್ಯಾಯಾಂಗದ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ಗುಜರಾತ್ ಮೂಲದ ‘ಜಸ್ಟಿಸ್ ಆನ್ ಟ್ರಯಲ್’ ಎಂಬ ಸ್ವಯಂ ಸೇವಾ ಸಂಸ್ಥೆಯು (ಎನ್‌ಜಿಒ) ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ದತ್ತ ಅವರಿದ್ದ ಏಕಸದಸ್ಯ ಪೀಠವು ಬಿಬಿಸಿ (ಬ್ರಿಟನ್) ಹಾಗೂ ಬಿಬಿಸಿ ಇಂಡಿಯಾಗೆ ನೋಟಿಸ್ ನೀಡಿದೆ.
ಎನ್‌ಜಿಒ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ, ‘ಸಾಕ್ಷ್ಯಚಿತ್ರದ ಮುಖೇನ ಭಾರತದ ಘನತೆಗೆ ಚ್ಯುತಿ ಉಂಟುಮಾಡಲಾಗಿದೆ. ನ್ಯಾಯಾಂಗ ಸೇರಿದಂತೆ ಇಡೀ ವ್ಯವಸ್ಥೆಯನ್ನೇ ಅವಹೇಳನ ಮಾಡಲಾಗಿದೆ’ ಎಂದು ದೂರಿದರು.
ಆಗ ನ್ಯಾಯಪೀಠವು ಪ್ರತಿವಾದಿಗಳಿಗೆ (ಬಿಬಿಸಿ ಬ್ರಿಟನ್ ಹಾಗೂ ಬಿಬಿಸಿ ಇಂಡಿಯಾ) ನೋಟಿಸ್ ಜಾರಿಗೊಳಿಸುವಂತೆ ಸೂಚಿಸಿತು. ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಪಟ್ಟಿ ಮಾಡುವಂತೆಯೂ ನಿರ್ದೇಶಿಸಿತು.