Tuesday, December 16, 2025

ಸೌತೆಕಾಯಿ ತಿಂದರೆ ಶೀತ, ಗ್ಯಾಸ್ ಹೆಚ್ಚಾಗುತ್ತಾ? ಈ ಮೂರು ಸಮಸ್ಯೆ ಇದ್ದವರು ಸೌತೆಕಾಯಿಗೆ ‘ನೋ’ ಎನ್ನಿ!

ಸೌತೆಕಾಯಿ ಅಂದರೆ ಸಾಕು, ನಮ್ಮ ಕಣ್ಣಮುಂದೆ ಬರುವುದು ತೂಕ ಇಳಿಕೆ, ಜಲಸಂಚಯನ ಮತ್ತು ಸಲಾಡ್‌ಗಳ ನೆನಪು. ಶೇ. 95 ರಷ್ಟು ನೀರು ಹೊಂದಿರುವ ಈ ತರಕಾರಿ ನಿರ್ಜಲೀಕರಣಕ್ಕೆ ಅದ್ಭುತ ಮದ್ದು. ಜೊತೆಗೆ ವಿಟಮಿನ್ ಕೆ, ಸಿ ಮತ್ತು ಪೊಟ್ಯಾಸಿಯಮ್‌ನಂತಹ ಪ್ರಮುಖ ಪೋಷಕಾಂಶಗಳ ಆಗರ. ಆದರೆ, ಪೌಷ್ಟಿಕತಜ್ಞೆ ಶ್ವೇತಾ ಅವರ ಪ್ರಕಾರ, ಈ ಆರೋಗ್ಯಕರ ತರಕಾರಿ ಎಲ್ಲರಿಗೂ ಸುರಕ್ಷಿತವಲ್ಲ! ಆಯುರ್ವೇದದ ದೃಷ್ಟಿಕೋನದಲ್ಲೂ ‘ತಂಪು’ ಗುಣ ಹೊಂದಿರುವ ಸೌತೆಕಾಯಿ ಕೆಲವರ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಹಾಗಾದರೆ, ಯಾವೆಲ್ಲಾ ಸಮಸ್ಯೆ ಇರುವವರು ಸೌತೆಕಾಯಿ ಸೇವನೆಯ ಬಗ್ಗೆ ಎಚ್ಚರಿಕೆ ವಹಿಸಬೇಕು?

ಈ 5 ಆರೋಗ್ಯ ಸಮಸ್ಯೆ ಇರುವವರು ಸೌತೆಕಾಯಿ ಸೇವನೆಗೆ ಬ್ರೇಕ್ ಹಾಕಿ

ಶೀತ, ಕಫ ಮತ್ತು ಅಸ್ತಮಾ: ಸೌತೆಕಾಯಿ ದೇಹದಲ್ಲಿ ‘ಕಫ’ವನ್ನು ಹೆಚ್ಚಿಸುವ ಗುಣ ಹೊಂದಿದೆ. ಈಗಾಗಲೇ ಶೀತ, ಕೆಮ್ಮು, ಕಫ, ಸೈನಸ್ ಅಥವಾ ಮೂಗಿನ ದಟ್ಟಣೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಬಾರದು. ಅದರಲ್ಲೂ ಚಳಿಗಾಲದ ಸಮಯದಲ್ಲಿ ಇದರ ಸೇವನೆಯು ಈ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಕೀಲು ನೋವು ಮತ್ತು ಊತ: ಸೌತೆಕಾಯಿಯ ಶೀತ ಸ್ವಭಾವವು ‘ವಾತ ದೋಷ’ವನ್ನು ಕೆರಳಿಸುತ್ತದೆ. ಕೀಲು ನೋವು, ಸಂಧಿವಾತ (Arthritis) ಅಥವಾ ದೇಹದಲ್ಲಿ ಊತದ ಸಮಸ್ಯೆ ಇರುವವರು ಇದನ್ನು ಸೇವಿಸಿದರೆ ಅವರ ನೋವು ಮತ್ತು ಸ್ಥಿತಿ ಮತ್ತಷ್ಟು ಹದಗೆಡುವ ಅಪಾಯವಿದೆ.

ಸೂಕ್ಷ್ಮ ಜೀರ್ಣಕ್ರಿಯೆ ಸಮಸ್ಯೆಗಳು: ಸೌತೆಕಾಯಿ ನಾರಿನಂಶದಿಂದ ಸಮೃದ್ಧವಾಗಿದ್ದರೂ, ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಹೊಂದಿರುವ ಕೆಲವರಿಗೆ ಇದು ತೊಂದರೆ ನೀಡಬಹುದು. ಇದರಲ್ಲಿರುವ ‘ಕುಕುರ್ಬಿಟಾಸಿನ್’ (Cucurbitacin) ಎಂಬ ಕಹಿ ಸಂಯುಕ್ತವು ಹೊಟ್ಟೆಯಲ್ಲಿ ಗ್ಯಾಸ್, ಉಬ್ಬುವುದು ಅಥವಾ ಅಜೀರ್ಣದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಮೂತ್ರ ಸಂಬಂಧಿ ತೊಂದರೆಗಳು: ಸೌತೆಕಾಯಿಯಲ್ಲಿ ನೀರಿನಂಶ ಅಧಿಕವಾಗಿರುವುದರಿಂದ ಇದು ನೈಸರ್ಗಿಕವಾಗಿ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಮೂತ್ರದ ಸಮಸ್ಯೆಗಳಿಂದ ಬಳಲುತ್ತಿರುವವರು ಅಥವಾ ಆಗಾಗ್ಗೆ ಮೂತ್ರ ವಿಸರ್ಜನೆ ಸಮಸ್ಯೆ ಇರುವವರು ಇದನ್ನು ಹೆಚ್ಚು ಸೇವಿಸಿದರೆ ಅವರ ಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು.

ಮಧುಮೇಹ ಮತ್ತು ಔಷಧಿ ತೆಗೆದುಕೊಳ್ಳುವವರು: ಸೌತೆಕಾಯಿ ಸಾಮಾನ್ಯವಾಗಿ ಮಧುಮೇಹಿಗಳಿಗೆ ಸುರಕ್ಷಿತ. ಆದರೆ, ಇನ್ಸುಲಿನ್ ಅಥವಾ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುವವರು ಇದನ್ನು ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ಇದರ ಸೇವನೆಯಿಂದ ಕೆಲವರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅತಿಯಾಗಿ ಕಡಿಮೆಯಾಗಿ, ನಡುಕ ಅಥವಾ ತಲೆತಿರುಗುವಿಕೆ ಸಮಸ್ಯೆಗಳು ಕಾಣಿಸಬಹುದು.

error: Content is protected !!