ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಎಎಪಿ ಮುಖಂಡ ಮತ್ತು ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಇಂದು ಸ್ನಾನಗೃಹದಲ್ಲಿ ಕುಸಿದು ಬಿದ್ದ ಹಿನ್ನೆಲೆ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೈಲಿನಲ್ಲಿ ಅವರ ಆರೋಗ್ಯ ಹದಗೆಟ್ಟ ನಂತರ ಮೂರು ದಿನಗಳಲ್ಲಿ ಈಗ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ತನ್ನ ಕಕ್ಷಿದಾರರು ತೀವ್ರ ಆರೋಗ್ಯ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಮತ್ತು ‘ಅಸ್ಥಿಪಂಜರವಾಗಿ ಮಾರ್ಪಟ್ಟಿದ್ದಾರೆ’ ಎಂದು ಸತ್ಯೇಂದರ್ ಜೈನ್ ಅವರ ವಕೀಲರು ಸುಪ್ರೀಂ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ದೆಹಲಿಯ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದ ಸಚಿವರಾಗಿದ್ದ 57 ವರ್ಷದ ಸತ್ಯೇಂದ್ರ ಜೈನ್ ಅವರನ್ನು ಮೇ 30ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಐಪಿಸಿ ಸೆಕ್ಷನ್ 109 ಮತ್ತು ಸೆಕ್ಷನ್ 13(2)ರ ಅಡಿ ಸತ್ಯೇಂದ್ರ ಜೈನ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಮಾಡುತ್ತಿದೆ.
ಕೊಲ್ಕತ್ತಾ ಮೂಲದ ಕಂಪನಿಯೊಂದಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಈ ವರ್ಷ ಮೇ ತಿಂಗಳಲ್ಲಿ 4.81 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಂಡ ನಂತರ ಇಡಿ ಸತ್ಯೇಂದ್ರ ಜೈನ್ ಅವರನ್ನು ಅರೆಸ್ಟ್ ಮಾಡಲಾಗಿತ್ತು.
ತನಿಖಾ ಸಂಸ್ಥೆಯು ಎಎಪಿ ನಾಯಕನ ವಿರುದ್ಧ ಸಿಬಿಐ ದಾಖಲಿಸಿದ ಎಫ್ಐಆರ್ ಆಧರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು. ಸತ್ಯೇಂದ್ರ ಜೈನ್ ಅವರು ಷೇರುದಾರರಾಗಿದ್ದ 4 ಕಂಪನಿಗಳಿಂದ ಪಡೆದ ಹಣದ ಮೂಲವನ್ನು ವಿವರಿಸಿಲ್ಲ ಎಂದು ಇಡಿ ಆರೋಪ ಮಾಡಿತ್ತು.