ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಟಕ್ ಮಹೀಂದ್ರಾ ಬ್ಯಾಂಕ್ನ ಸಂಸ್ಥಾಪಕ ಹಾಗೂ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಉದಯ್ ಕೋಟಕ್ ಅವರ ಪುತ್ರ ಜಯ್ ಕೋಟಕ್, 2015ರ ಫೆಮಿನಾ ಮಿಸ್ ಇಂಡಿಯಾ ಆದಿತಿ ಆರ್ಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ .
ಟ್ವಿಟರ್ನಲ್ಲಿ ಜಯ್ ಕೋಟಕ್ ಈ ಸಿಹಿ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ವೇಳೆ ಯಾಲೆ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರುವ ಆದಿತಿ ಆರ್ಯಾಗೂ ಅಭಿನಂದನೆ ಸಲ್ಲಿಸಿದ್ದಾರೆ.
‘ನನ್ನ ನಿಶ್ಚಿತ ವಧು ಅದಿತಿ, ಇಂದು ಯಾಲೆ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪೂರೈಸಿದಿದ್ದಾರೆ. ನಿನ್ನ ಬಗ್ಗೆ ಅತೀವ ಹೆಮ್ಮೆ ಆಗುತ್ತಿದೆ’ ಎಂದು ಪದವಿ ಪಡೆಯುವ ನಿಟ್ಟಿನಲ್ಲಿ ಕಪ್ಪು ಬಣ್ಣದ ನಿಲುವಂಗಿ ಹಾಗೂ ಹ್ಯಾಟ್ ಧರಿಸಿದ್ದ ಅದಿತಿ ಆರ್ಯಾ ಅವರ ಎರಡು ಚಿತ್ರಗಳನ್ನು ಜಯ್ ಕೋಟಕ್ ಪೋಸ್ಟ್ ಮಾಡಿದ್ದಾರೆ.
ಜಯ್ ಕೋಟಕ್ ಇದನ್ನು ಪೋಸ್ಟ್ ಮಾಡಿದ ಬಳಿಕ ಅಂದಾಜು 7 ಸಾವಿರ ಲೈಕ್ಗಳು ಬಂದಿದ್ದು 9 ಲಕ್ಷ ವೀವ್ಸ್ಗಳು ಬಂದಿವೆ. ಉದ್ಯಮಿ ಹರ್ಷ್ ಗೋಯೆಂಕಾ ಸೇರಿದಂತೆ ಬಹಳಷ್ಟು ಜನರು ಈ ಜೋಡಿಗೆ ಶುಭ ಹಾರೈಸಿದ್ದು ಭವಿಷ್ಯ ಉತ್ತಮವಾಗಿರಲಿ ಎಂದಿದ್ದಾರೆ.
ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಜಯ್ ಕೋಟಕ್ ಪದವಿ ಪೂರೈಸಿದ್ದಾರೆ. ಅರ್ಥಶಾಸ್ತ್ರ ಹಾಗೂ ಇತಿಹಾಸ ವಿಷಯಗಳಲ್ಲಿ ಪದವಿ ಪೂರೈಸಿರುವ ಜಯ್ ಕೋಟಕ್, ಬಳಿಕ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನಿಂದ ಎಂಬಿಎ ಪದವಿಯನ್ನು ಪಡೆದಯಕೊಂಡಿದ್ದಾರೆ. ಪ್ರಸ್ತುತ ಜಯ್ ಕೋಟಕ್, ಕೋಟಕ್ 811 ನ ಉಪಾಧ್ಯಕ್ಷರಾಗಿದ್ದಾರೆ, ಇದು ಕೋಟಕ್ ಮಹೀಂದ್ರಾ ಬ್ಯಾಂಕ್ನಿಂದ ಪ್ರಾಯೋಜಿಸಲ್ಪಟ್ಟ ಡಿಜಿಟಲ್-ಮೊದಲ ಮೊಬೈಲ್ ಬ್ಯಾಂಕ್ ಆಗಿದೆ.
ಇನ್ನೊಂದೆಡೆ ಅದಿತಿ ಆರ್ಯಾ ದೆಹಲಿ ವಿಶ್ವವಿದ್ಯಾಲಯದ ಶಹೀದ್ ಸುಖ್ದೇವ್ ಕಾಲೇಜಿನಿಂದ ಪದವಿ ಪಡೆದುಕೊಂಡಿದ್ದಾರೆ. ಅದರೊಂದಿಗೆ ಅರ್ನ್ಸ್ಟ್ & ಯಂಗ್ನಲ್ಲಿ ಮಾಜಿ ಸಂಶೋಧನಾ ವಿಶ್ಲೇಷಕರಾಗಿ ಕಲಸ ಮಾಡಿದ್ದರು. 2015ರಲ್ಲಿ ಫೆಮಿನಾ ಮಿಸ್ ಇಂಡಿಯಾದ 52ನೇ ಆವೃತ್ತಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಪ್ರತಿಷ್ಠಿತ ಐವಿ ಲೀಗ್ ಶಾಲೆಯಾದ ಯೇಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪೂರೈಸಲು ಯುನೈಟೆಡ್ ಸ್ಟೇಟ್ಸ್ಗೆ ತೆರಳುವ ಮುನ್ನ ಅವರು ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದರು. ಕನ್ನಡದಲ್ಲಿ ಮುನಿರತ್ನ ಕುರುಕ್ಷೇತ್ರ ಚಿತ್ರದಲ್ಲಿ ನಟಿಸಿದ್ದ ಈಕೆ ‘ಉತ್ತರೆ’ಯ ಪಾತ್ರ ನಿಭಾಯಿಸಿದ್ದರು.