ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‍ನ ಎನ್‍ಸಿಸಿ ಪರೇಡ್ ಮೈದಾನದಲ್ಲಿ ಶನಿವಾರ ನಡೆದ ಯೋಗ ಮಹೋತ್ಸವದಲ್ಲಿ ಸುಮಾರು 50,000ಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಸಾಕ್ಷಿಯಾಗಿದ್ದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ 25 ದಿನಗಳ ಯೋಗ ಕಾರ್ಯಕ್ರಮವನ್ನು ಕೇಂದ್ರ ಆಯುಷ್ ಸಚಿವಾಲಯದ ಅಡಿಯಲ್ಲಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಇನ್ಸಿಟಿಟ್ಯೂಟ್ ಆಫ್ ಯೋಗ (MDNIY) ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ತೆಲಂಗಾಣ ರಾಜ್ಯಪಾಲರಾದ ಡಾ.ತಮಿಳಿಸಾಯಿ ಸೌಂದರರಾಜನ್ , ಈ ಸುಂದರ ಮುಂಜಾನೆ ಯೋಗ ಮಾಡಲು ಇಲ್ಲಿಗೆ ಬಂದಿರುವುದು ನನಗೆ ಸಂತೋಷವಾಗಿದೆ. ಯೋಗವನ್ನು ಸಂತೋಷ ಮತ್ತು ಆರೋಗ್ಯದ ಹಬ್ಬವಾಗಿ ಆಚರಿಸಲು ನಮಗೆಲ್ಲರಿಗೂ ಇದೊಂದು ಅದ್ಭುತ ಅವಕಾಶ. ಪ್ರತಿಯೊಬ್ಬರೂ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ನಾನು ಕೇಳುತ್ತೇನೆ. ಯೋಗವನ್ನು ಜಾಗತಿಕ ಹಂತಕ್ಕೆ ತಲುಪಿಸಿದ್ದಕ್ಕೆ ಮತ್ತು ಉತ್ತಮ ಆರೋಗ್ಯದೆಡೆಗಿನ ಸಾಮೂಹಿಕ ಆಂದೋಲನವನ್ನಾಗಿ ಮಾಡಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ.ರಿಗೆ ಧನ್ಯವಾದ ಹೇಳಬೇಕು. ಯೋಗವು ನಿಮ್ಮನ್ನು ಸಂತೋಷಪಡಿಸುತ್ತದೆ, ಯೋಗ ನಿಮ್ಮನ್ನು ಆರೋಗ್ಯಗೊಳಿಸುತ್ತದೆ ಎಂದರು.
ಕೇಂದ್ರ ಬಂದರು ಮತ್ತು ಹಡಗು ಮತ್ತು ಜಲ ಮಾರ್ಗ ಸಚಿವ ಸರ್ಬನಾಂದ ಸೋನುವಾಲ್, ಕೇಂದ್ರ ಸಂಸ್ಕೃತಿ , ಪ್ರವಾಸೋದ್ಯಮ ಮತ್ತು ಡೊನರ್, ಜಿ. ಕಿಶನ್ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆಯುಷ್ ಖಾತೆಯ ಕೇಂದ್ರ ಸಚಿವ ಡಾ. ಮುಂಜ್ಪಾರ ಮಹೇಂದ್ರಭಾಯಿ ಅವರು ಈ ಭವ್ಯವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮತ್ತು ಮಾಜಿ ಬ್ಯಾಡ್ಮಿಂಟನ್ ಪಟು ಮತ್ತು ಕೋಚ್ ಪುಲ್ಲೇಲ ಗೋಪಿಚಂದ್, ಬಹುಭಾಷಾ ನಟಿ ಶ್ರೀ ಲೀಲಾ, ವಿಶ್ವಕ್ಸೇನ್, ಕೃಷ್ಣ ಚೈತನ್ಯ ಸೇರಿದಂತೆ ಇತರ ಗಣ್ಯರು ಕೂಡ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. MDNIY ನಿರ್ದೇಶಕ ಡಾ. ಈಶ್ವರ ವಿ. ಬಸವರಡ್ಡಿ ಅವರು ಸಾಮಾನ್ಯ ಯೋಗ ಪ್ರೋಟೋಕಾಲ್ (CYP) ನಡೆಸಿದರು.