ಹೊಸ ದಿಗಂತ ವರದಿ, ಕಲಬುರಗಿ:
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಸೇಡಂ ಮತಕ್ಷೇತ್ರದಲ್ಲಿ ಅತಿಹೆಚ್ಚು ಮತಗಳಿಂದ ಜಯಗಳಿಸಿ ಶಾಸಕರಾಗಿ ಆಯ್ಕೆಯಾಗಿರುವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಎರಡನೇ ಬಾರಿಗೆ ಸಚಿವ ಸ್ಥಾನ ದೊರಕಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಸೇಡಂ ಕ್ಷೇತ್ರದಿಂದ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಪಾಟೀಲ್ ವಿರುದ್ದ ದಾಖಲೆಯ 43 ಸಾವಿರ ಮತಗಳ ಅಂತರದಿಂದ ಡಾ. ಶರಣಪ್ರಕಾಶ ಅವರು ಭರ್ಜರಿ ಗೆಲುವು ದಾಖಲಿಸಿದರು.
ಅಲ್ಲದೇ, 2013ರಿಂದ 2018ರ ಅವಧಿಯಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ರಾಜ್ಯದ ಸರಕಾರ ವೈದ್ಯಕೀಯ ಕಾಲೇಜುಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿದ್ದರು.
ತವರು ಜಿಲ್ಲೆ ಕಲಬುರಗಿಯಲ್ಲಿ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್)ಗೆ ನೂತನ ಕಾಲೇಜು ಕಟ್ಟಡವನ್ನು ನಿರ್ಮಿಸಿದರು.
ಜಯದೇವ ಹೃದ್ರೋಗ ಆಸ್ಪತ್ರೆಯ ಶಾಖೆಯನ್ನು ಕಲಬುರಗಿಯಲ್ಲಿ ಸ್ಥಾಪಿಸಿದರು. ಇದೀಗ 7160 ಕೋಟಿ ವೆಚ್ಚದಲ್ಲಿ ಕೆಕೆಆರ್ಡಿಬಿ ಅನುದಾನದಲ್ಲಿ 300 ಹಾಸಿಗೆಯ ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗುತ್ತಿದೆ.
ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿರುವ ಡಾ. ಶರಣಪ್ರಕಾಶ ಅವರು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರೂ ಆಗಿದ್ದಾರೆ. ಸೇಡಂ ತಾಲೂಕಿನ ಉಡಗಿ ಗ್ರಾಮದವರು.