ಹೊಸ ದಿಗಂತ ವರದಿ, ಹುಬ್ಬಳ್ಳಿ:
ಹಿಂದೂ ಜಾಗೃತಿ ಅಭಿಯಾನ ಹಾಗೂ ಸಚ್ಛಿದಾನಂದ ಪರಬ್ರಹ್ಮ ಡಾ. ಅಠವಲೆ ಅವರ 81ನೇ ಜನ್ಮೋತ್ಸವ ಅಂಗವಾಗಿ ಹಿಂದೂ ಜನಜಾಗೃತಿ ವತಿಯಿಂದ ನಗರದಲ್ಲಿ ಬೃಹತ್ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿತು.
ಶನಿವಾರ ಇಲ್ಲಿಯ ಮೂರು ಸಾವಿರಮಠದ ಆವರಣದಲ್ಲಿ ಸಮಾವೇಶಗೊಂಡ ನೂರಾರು ಹಿಂದೂ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಿದರು.
ಮೂರುಸಾವಿರ ಮಠದ ಆವರಣದಲ್ಲಿ ಭಗವಾಧ್ವಜಾರೋಹಣ ಹಾಗೂ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಕ್ಕಳು ವಿವಿಧ ನೃತ್ಯ ಪ್ರದರ್ಶನ ನೀಡಿದರು. ಇದಾದ ನಂತರ ಡಾ.ಅಠವಲೆ ಅವರ ಪಲ್ಲಕ್ಕಿ ಉತ್ಸವದ ಮೂಲಕ ಶೋಭಾಯತ್ರೆ ಆರಂಭಿಸಲಾಯಿತು.
ಶೋಭಾಯಾತ್ರೆಯೂ ಮೂರುಸಾವಿರಮಠದಿಂದ ಆರಂಭಗೊಂಡು ಕಿತ್ತೂರ ಚೆನ್ನಮ್ಮ ವೃತ್ತ, ಕೊಪ್ಪಿಕರ ರಸ್ತೆ, ತುಳಜಾಭವಾನಿ ವೃತ್ತದ ಮೂಲಕ ಮರಳಿ ಮೂರುಸಾವಿರಮಠಕ್ಕೆ ಆಗಮಿಸಿ ಅಂತ್ಯಗೊಂಡಿತು.
ಮೆರವಣಿಗೆಯುದ್ದಕ್ಕೂ ವೇಷಭೂಷಣ ತೊಟ್ಟ ಪುಟ್ಟ ಮಕ್ಕಳು, ಜೊತೆಗೆ ಮಹಿಳೆಯರು ಪೂರ್ಣಕುಂಭ ಮೆರವಣಿಗೆ ಹಾಗೂ ವಿವಿಧ ವಾಧ್ಯಮೇಳದೊಂದಿಗೆ ಶೋಭಾಯಾತ್ರೆ ನಡೆಯಿತು.