ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿವೇಶನಗಳಿಗೆ ಸಂಬಂಧಪಟ್ಟಂತೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಎದುರಿಸುತ್ತಿದ್ದ ಆರ್ ಟಿ ಐ ಕಾರ್ಯಕರ್ತ ಹರೀಶ್ ಹಳ್ಳಿ (40) ಪೊಲೀಸರು ವಿಚಾರಣೆಗೆ ಕರೆತರುವ ವೇಳೆ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮೇಲ್ಸೇತುವೆಯಿಂದ ಹಾರಿ ಸಾವಿಗೀಡಾಗಿದ್ದಾನೆ. ದಾವಣಗೆರೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ಆರ್ ಟಿ ಐ ಕಾರ್ಯಕರ್ತ ಹರೀಶ್ ಹಳ್ಳಿ, ಮೂರು ನಿವೇಶನಗಳ ನಕಲಿ ದಾಖಲೆ ಸೃಷ್ಟಿಸಿ ಕುಟುಂಬದವರ ಹೆಸರಿಗೆ ಮಾಡಿಸಿಕೊಂಡ ಆರೋಪ ಎದುರಿಸುತ್ತಿದ್ದರು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು. ಈ ಸಂಬಂಧ ಗಾಂಧಿನಗರ ಪಿಎಸ್ ಐ ಪೊಲೀಸ್ ಠಾಣೆಗೆ ಆರೋಪಿಯನ್ನು ವಿಚಾರಣೆಗೆಂದು ಕರೆತರುತ್ತಿದ್ದರು. ಈ ವೇಳೆ ನಸುಕಿನ ಜಾವ 2.30ರ ವೇಳೆ ಮೇಲ್ಸೇತುವೆಯಿಂದ ಜಿಗಿದು ಸರ್ವಿಸ್ ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಹರೀಶ್, ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣೆಯ ಸಿಬ್ಬಂದಿ ನನ್ನ ಗಂಡನನ್ನು ಬೆಳಗಿನ ಜಾವ 1 ಗಂಟೆಗೆ ಕರೆದುಕೊಂಡು ಹೋಗಿದ್ದು, ಬೆಳಗ್ಗೆ 4.30ಕ್ಕೆ ಫೋನ್ ಮಾಡಿ ನಿಮ್ಮ ಗಂಡನಿಗೆ ಆಸ್ಪತ್ರೆಗೆ ಸೇರಿಸಿದ್ದೇವೆ ಸೀರಿಯಸ್ ಆಗಿದೆ ಎಂದು ಹೇಳಿದರು. ನನ್ನ ಗಂಡನ ಸಾವಿಗೆ ಪಿಎಸ್ಐ ಕೃಷ್ಣಪ್ಪ, ಪಿಸಿ ದೇವರಾಜ್, ಚಾಲಕ ಇರ್ಷದ್ ಅವರೇ ನೇರ ಕಾರಣ. ಬಾಬುರಾವ್ ಎಂಬುವರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಹರೀಶ್ ಪತ್ನಿ ಲತಾ ದೂರಿನಲ್ಲಿ ಹೇಳಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಎಸ್ಪಿ ಕೆ.ಅರುಣ್, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಸಿಐಡಿ ತನಿಖೆಗೆ ಮೃತನ ಕುಟುಂಬ ಒತ್ತಾಯಿಸಿದ್ದು ಪರಿಶೀಲಿಸಲಾಗುವುದು. ಆರೋಪಿತ ಸಿಬ್ಬಂದಿ ವಿರುದ್ದ ಇಲಾಖಾ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.