ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನೂತನ ಸಂಸತ್ ಭವನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ನೂತನ ಕಟ್ಟಡದಲ್ಲಿ ತಮ್ಮ ಮೊದಲ ಭಾಷಣ ಮಾಡಿದರು. ಈ ಘಳಿಗೆ ಭಾರತದ 140 ಕೋಟಿ ಜನರ ಆಕಾಂಕ್ಷೆಯ ಸಂಕೇತ ಎಂದು ಬಣ್ಣಿಸಿದರು.
140 ಕೋಟಿ ಜನರ ಆಕಾಂಕ್ಷೆಯ ಸಂಕೇತ
ಪ್ರತಿಯೊಂದು ದೇಶದ ಅಭಿವೃದ್ಧಿಯಲ್ಲಿ ಕೆಲವು ಕ್ಷಣಗಳು ಮಾತ್ರ ನೆನಪಿನಲ್ಲುಳಿಯುತ್ತವೆ. ಮೇ 28 ಅಂತಹ ದಿನಗಳಲ್ಲೊಂದಾಗಿದೆ. ಹೊಸ ಸಂಸತ್ತು ಕೇವಲ ಕಟ್ಟಡವಲ್ಲ, ಇದು ಭಾರತದ 140 ಕೋಟಿ ಜನರ ಆಕಾಂಕ್ಷೆಯ ಸಂಕೇತವಾಗಿದೆ. ಇದು ಭಾರತದ ಸಂಕಲ್ಪ ಕುರಿತು ಜಗತ್ತಿಗೆ ಸಂದೇಶ ನೀಡುತ್ತದೆ. ಈ ಹೊಸ ಸಂಸತ್ತು ಸ್ವಾವಲಂಬಿ ಭಾರತದ ಉದಯಕ್ಕೆ ಸಾಕ್ಷಿಯಾಗಲಿದೆ ಎಂದರು.
ಇತಿಹಾಸದಲ್ಲಿ ಮರೆಯಲಾಗದಂತ ದಿನ
ದೇಶದ ವಿಕಾಸಯಾತ್ರೆಗೆ ಹೊಸ ಸಂಸತ್ ಭವನ ಸಾಕ್ಷಿಯಾಗಿದೆ. ಇಂದು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನವಾಗಿದೆ. ಈ ದಿನ ಇತಿಹಾಸದಲ್ಲಿ ಮರೆಯಲಾಗಂಥ ದಿನ. ಈ ಭವನ ವಿಶ್ವದಲ್ಲಿ ಸಂದೇಶ ಸಾರುವಂತಹ ಲೋಕತಂತ್ರದ ಮಂದಿರವಾಗಿದೆ ಎಂದು ನೂತನ ಸಂಸತ್ ಭವನದ ಕುರಿತು ಪ್ರಧಾನಿ ಮಾತನಾಡಿದರು.
ಸೆಂಗೋಲ್ ನಮಗೆ ಸ್ಫೂರ್ತಿ
ಇಂದು ಸಂಸತ್ತಿನಲ್ಲಿ ಪವಿತ್ರವಾದ ‘ಸೆಂಗೋಲ್’ ಅನ್ನು ಸ್ಥಾಪಿಸಲಾಯಿತು. ತಮಿಳುನಾಡಿನ ಚೋಳ ರಾಜವಂಶದಲ್ಲಿ ಈ ಸೆಂಗೋಲ್, ನ್ಯಾಯ, ಸದಾಚಾರ ಮತ್ತು ಉತ್ತಮ ಆಡಳಿತವನ್ನು ಸೂಚಿಸುತ್ತದೆ. ಪವಿತ್ರವಾದ ‘ಸೆಂಗೋಲ್’ ಎಂಬ ಹೆಮ್ಮೆಯನ್ನು ಮರುಸ್ಥಾಪಿಸಲು ಸಾಧ್ಯವಾಗಿರುವುದು ನಮ್ಮ ಸೌಭಾಗ್ಯ. ಈ ಸದನದಲ್ಲಿ ಕಲಾಪ ಆರಂಭವಾದಾಗಲೆಲ್ಲ ‘ಸೆಂಗೋಲ್’ ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.
ಭಾರತ ಮುನ್ನಡೆದರೆ ಜಗತ್ತು ಮುಂದೆ ಸಾಗಲಿದೆ
ಭಾರತ ಯಾವಾಗ ಮುನ್ನಡೆಯುತ್ತದೋ ಆಗ ಜಗತ್ತು ಮುಂದೆ ಸಾಗುತ್ತದೆ. ಈ ಹೊಸ ಸಂಸತ್ತು ಭಾರತದ ಅಭಿವೃದ್ಧಿಯ ಮೂಲಕ ಪ್ರಪಂಚದ ಅಭಿವೃದ್ಧಿಗೆ ಕಾರಣವಾಗುತ್ತದೆ. ಭಾರತ ಪ್ರಜಾಪ್ರಭುತ್ವದ ತಾಯಿ. ಇದು ಜಾಗತಿಕ ಪ್ರಜಾಪ್ರಭುತ್ವದ ಅಡಿಪಾಯವೂ ಹೌದು. ಪ್ರಜಾಪ್ರಭುತ್ವ ನಮ್ಮ ‘ಸಂಸ್ಕಾರ’, ಕಲ್ಪನೆ ಮತ್ತು ಸಂಪ್ರದಾಯವಾಗಿದೆ ಎಂದರು.
ನಮಗೆ ಹೊಸ ಸಂಸತ್ತಿನ ಅಗತ್ಯವಿತ್ತು
ಹಲವಾರು ವರ್ಷಗಳ ವಿದೇಶಿ ಆಡಳಿತವು ನಮ್ಮ ಹೆಮ್ಮೆಯನ್ನು ನಮ್ಮಿಂದ ಕದ್ದಿದೆ. ಇಂದು ಭಾರತ ಆ ವಸಾಹತುಶಾಹಿ ಮನಸ್ಥಿತಿಯನ್ನು ಹೊಸ ಸಂಸತ್ ಭವನ ಉದ್ಘಾಟನೆಯೊಂದಿಗೆ ಬಿಟ್ಟಿದೆ. ನಮಗೆ ಹೊಸ ಸಂಸತ್ತಿನ ಅಗತ್ಯವಿತ್ತು. ಮುಂಬರುವ ದಿನಗಳಲ್ಲಿ ಸೀಟುಗಳು ಮತ್ತು ಸಂಸದರ ಸಂಖ್ಯೆ ಹೆಚ್ಚಾಗುವುದನ್ನು ನಾವು ನೋಡಬೇಕಾಗಿದೆ. ಅದಕ್ಕಾಗಿಯೇ ಹೊಸ ಸಂಸತ್ತನ್ನು ರಚಿಸುವುದು ಈ ಸಮಯದ ಅಗತ್ಯವಾಗಿತ್ತು ಎಂದರು.
ಇಂದು ನನಗೆ ಅಪಾರ ತೃಪ್ತಿಯಾಗಿದೆ
ಪಂಚಾಯತ್ ಭವನದಿಂದ ಸಂಸತ್ ಭವನದವರೆಗೆ ನಮ್ಮ ಸ್ಫೂರ್ತಿ, ನಮ್ಮ ದೇಶ ಮತ್ತು ಅದರ ಜನರ ಅಭಿವೃದ್ಧಿಯಾಗಿದೆ. ಇಂದು ಈ ಹೊಸ ಸಂಸತ್ತಿನ ನಿರ್ಮಾಣದ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ 4 ಕೋಟಿ ಬಡವರಿಗೆ ಮನೆಗಳು ಮತ್ತು 11 ಕೋಟಿ ಶೌಚಾಲಯಗಳ ನಿರ್ಮಾಣದ ಬಗ್ಗೆ ಯೋಚಿಸಿದಾಗ ನನಗೆ ಅಪಾರ ತೃಪ್ತಿಯಾಗಿದೆ.
ಈ ಹೊಸ ಸಂಸತ್ತಿನಲ್ಲಿರುವ ಆಧುನಿಕ ಸೌಲಭ್ಯಗಳ ಬಗ್ಗೆ ನಾವು ಮಾತನಾಡುವಾಗ, ದೇಶದ ಹಳ್ಳಿಗಳನ್ನು ಸಂಪರ್ಕಿಸಲು ನಾವು 4 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ರಸ್ತೆಗಳನ್ನು ನಿರ್ಮಿಸಿದ್ದೇವೆ ಎಂಬ ಭಾವನೆ ವ್ಯಕ್ತವಾಗುತ್ತದೆ ಎಂದು ಹೇಳಿದರು.