ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಇಂದು ಅಸ್ಸಾಂನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ.
ಅತ್ಯಾಧುನಿಕ ವಂದೇ ಭಾರತ್ ರೈಲಿಗೆ ಪ್ರಧಾನಮಂತ್ರಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಪ್ರಧಾನಮಂತ್ರಿಯವರು ನ್ಯೂ ಬೊಂಗೈಗಾಂವ್–ದುದ್ನೋಯ್–ಮೆಂಡಿಪಥರ್ ಮತ್ತು ಗುವಾಹಟಿ–ಚಾಪರ್ಮುಖ್ ಮಾರ್ಗದ ಹೊಸದಾಗಿ ವಿದ್ಯುದ್ದೀಕರಿಸಿದ ವಿಭಾಗಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಅಸ್ಸಾಂನ ಗುವಾಹಟಿ ಮತ್ತು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಡುವಿನ ಮೊದಲ ಪ್ರೀಮಿಯಂ ಸೆಮಿ-ಹೈ ಸ್ಪೀಡ್ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ, ಸುಸಜ್ಜಿತ ಸಂಪೂರ್ಣ ಏರ್ ಕಂಡಿಷನರ್ ರೈಲು ಇದಾಗಿದೆ.
“ಈ ರೈಲಿನ ಸಂಚಾರವು ವಾರಕ್ಕೆ ಐದು ದಿನಗಳು ಮಾತ್ರ ಇರಲಿದೆ. ಮಂಗಳವಾರ ಈ ರೈಲಿನ ಯಾವುದೇ ಸೇವೆ ಇರುವುದಿಲ್ಲ” ಎಂದು ಅಧಿಕಾರಿ ಹೇಳಿದ್ದಾರೆ.
ಈ ಹೊಸ ಸೇವೆಯು ಗುವಾಹಟಿ ಮತ್ತು ನ್ಯೂ ಜಲ್ಪೈಗುರಿ ನಡುವಿನ 411 ಕಿಮೀ ದೂರವನ್ನು 5 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯು ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ.