ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರ ನೆಚ್ಚಿನ ನಾಯಕ ಹಾಗೂ ವಿಶ್ವಮಾನ್ಯ ನಾಯಕ ಪ್ರಧಾನಿ ನರೇಂದ್ರ ಮೋದಿ ಸಾರಥ್ಯದ ಕೇಂದ್ರ ಸರಕಾರ ಒಂಭತ್ತು ವರ್ಷಗಳನ್ನು ಯಶ್ವಿಯಾಗಿ ಪೂರೈಸಿದೆ. ಈ 9 ವರ್ಷ ರಾಷ್ಟ್ರದಲ್ಲಿ ಬಹಳಷ್ಟು ಬೆಳವಣಿಗೆ, ಬದಲಾವಣೆ ಆಗಿದೆ. ದೇಶವು ಬಹಳ ಕ್ಷೇತ್ರಗಳಲ್ಲಿ ಮುನ್ನಡೆದಿದೆ. ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲೂ ಉನ್ನತೀಕರಣ ಆಗಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ಮೋದಿಜಿ ಅವರು ಅಧಿಕಾರ ಪಡೆದ ಸಂದರ್ಭದಲ್ಲಿ ಭಾರತದ ಆರ್ಥಿಕ ಪ್ರಗತಿ ಕುಂಠಿತವಾಗಿತ್ತು, ಸ್ಪಷ್ಟ ನೀತಿ ಇರಲಿಲ್ಲ. ಭಾರತದ ವಿಶ್ವಾಸಾರ್ಹತೆ ಬಹಳ ಕೆಳಮಟ್ಟಕ್ಕೆ ಕುಸಿದಿತ್ತು. ಆ ವೇಳೆ ಅಧಿಕಾರಕ್ಕೆ ಬಂದ ಅವರು, ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.
ರಾಷ್ಟ್ರದ ಸಮಗ್ರತೆ, ಸುರಕ್ಷತೆ, ಏಕತೆ ಕಾಪಾಡಿದರು. ಕಾಶ್ಮೀರವನ್ನು ದೇಶದ ಜೊತೆ ಮರುಜೋಡಣೆ ಮಾಡಿದ್ದಾರೆ. ಜಿಎಸ್‍ಟಿ ಜಾರಿ ಮಾಡಿದರು, ಇದರಿಂದ ಕರ್ನಾಟಕದ ಜಿಎಸ್‍ಟಿ ಸಂಗ್ರಹದಲ್ಲಿ ಆದಾಯ ಹೆಚ್ಚಾಗಿದೆ. ಹೀಗಾಗಿ ರಾಷ್ಟ್ರದ ಆರ್ಥಿಕತೆ ಬೆಳವಣಿಗೆ ಸಾಧ್ಯವಾಗಿದೆ ಎಂದು ತಿಳಿಸಿದರು.
ಹೊಸ ಶಿಕ್ಷಣ ನೀತಿ (ಎನ್‍ಇಪಿ) ಅನುಷ್ಠಾನಕ್ಕೆ ತರಲಾಗಿದೆ. ಸಾಮಾಜಿಕವಾಗಿ -ಆರ್ಥಿಕ ಹಿನ್ನಡೆ ಇರುವವರಿಗೆ ಶೇ 10 ಮೀಸಲಾತಿ ಕೊಡಲಾಗಿದೆ. ಅವರ ಯೋಜನೆಗಳಿಂದ ಕರ್ನಾಟಕಕ್ಕೆ ಗರಿಷ್ಠ ಪ್ರಯೋಜನ ಲಭಿಸಿದೆ ಎಂದು ಹೇಳಿದರು.
ಮೋದಿಯವರಿಂದಾಗಿ ಅಪ್ಪರ್ ಭದ್ರಾಗೆ 5,130 ಕೋಟಿ ಮತ್ತು ರೈಲ್ವೆ ಬಜೆಟ್‍ನಡಿ 7500 ಕೋಟಿ ಲಭಿಸಿದೆ. ಇದಲ್ಲದೆ ನಮಗೆ ಬೆಂಗಳೂರು ಮೈಸೂರು ಹೈವೇ, 4 ವೈದ್ಯಕೀಯ ಕಾಲೇಜು ಕೊಟ್ಟಿದ್ದಾರೆ. ಒಂದು ಐಐಟಿ, ಮಂಗಳೂರು ಕಾರವಾರ ಪೋರ್ಟ್ ವಿಸ್ತರಣೆ ನಡೆಯಲಿದೆ ಎಂದರು.
12,030 ಕೋಟಿ ಅನುದಾನವು ಕರಾವಳಿ ಪ್ರದೇಶ ಅಭಿವೃದ್ಧಿಗಾಗಿ ಲಭಿಸಿದೆ. ಉದ್ಯೋಗ ದೃಷ್ಟಿಯಿಂದ ಜವಳಿ ಪಾರ್ಕ್ ಸಿಕ್ಕಿದೆ. 1 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ. ಕರ್ನಾಟಕದ ಜನರು ಮೋದಿಜಿ ಅವರಿಗೆ ಅಭಾರಿ ಆಗಿದ್ದಾರೆ ಎಂದು ಹೇಳಿದರು.
ರೈತ ಸಮ್ಮಾನ್ ಯೋಜನೆಯಡಿ 54 ಲಕ್ಷ ರೈತರಿಗೆ ನೇರವಾಗಿ ಹಣ ಸಿಗುತ್ತಿದೆ. 1.5 ಕೋಟಿ ಆಯುಷ್ಮಾನ್ ಕಾರ್ಡ್ ಕರ್ನಾಟಕಕ್ಕೆ ಸಿಕ್ಕಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 17 ಲಕ್ಷ ಮನೆಗಳ ಮಂಜೂರಾತಿ ಹಿಂದಿನ ಸರಕಾರದ ಅವಧಿಯಲ್ಲಿ ತಡೆಹಿಡಿದಿದ್ದು, ಅವುಗಳಿಗೆ ನಾವು ಒಪ್ಪಿಗೆ ಕೊಟ್ಟಿದ್ದೇವೆ. 9 ವರ್ಷಗಳ ಬದಲಾವಣೆ ಬಹಳ ಪ್ರಮುಖವಾಗಿದ್ದು, ವಿಶ್ವದಲ್ಲಿ ಭಾರತಕ್ಕೆ ಮನ್ನಣೆ ಲಭಿಸಿದೆ ಎಂದು ನುಡಿದರು.
ವಿಶ್ವಮಟ್ಟದಲ್ಲಿ ಆರ್ಥಿಕವಾಗಿ 5ನೇ ಸ್ಥಾನಕ್ಕೆ ಭಾರತ ಏರಿದೆ. ಅವರು ನುಡಿದಂತೆ ನಡೆದು ತೋರಿಸಿದ್ದಾರೆ. 9 ವರ್ಷ ಅತ್ಯಂತ ನೆನಪಿಡುವ ಅಭಿವೃದ್ಧಿಯ ಅದ್ಭುತ ದಿನಗಳು. ಅಮೃತಕಾಲದಲ್ಲಿ ಮೋದಿಜಿ ಅವರ ನಾಯಕತ್ವ ಮುಂದುವರಿಯುವ ಆಶಯವನ್ನು ವ್ಯಕ್ತಪಡಿಸಿದರು.