ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮುಗಿಲೆದಿದ್ದು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಗ್ರೆನೇಡ್ಗಳೊಂದಿಗೆ ಕನಿಷ್ಠ 25 ಮಂದಿಯನ್ನು ಸೇನೆ ಮತ್ತು ಅರೆ ಸೇನಾಪಡೆಗಳು ವಶಕ್ಕೆ ಪಡೆದಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಇಂಫಾಲ್ ಕಣಿವೆಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಂಡಿನ ದಾಳಿ ಹಾಗೂ ಘರ್ಷಣೆಯ ವರದಿಯಾದ ನಂತರ ಶಸ್ತ್ರಾಸ್ತ್ರಗಳೊಂದಿಗೆ ಹಲವು ಜನರನ್ನು ಬಂಧಿಸಲಾಗಿದೆ ಎಂದು ರಕ್ಷಣಾ ಪಡೆಗಳ ವಕ್ತಾರರು ಹೇಳಿದ್ದಾರೆ.
ಇಂಫಾಲ್ ಪೂರ್ವದ ಸಂಸಾಬಿ, ಗ್ವಾಲ್ಟಾಬಿ, ಶಾಬುಂಕೋಲ್, ಖುನಾವೊದಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ, ಸೇನೆಯು 22 ದುಷ್ಕರ್ಮಿಗಳನ್ನು ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಿದೆ. ಅವರಿಂದ ಐದು 12 ಬೋರ್ ಡಬಲ್ ಬ್ಯಾರೆಲ್ ರೈಫಲ್ಗಳು, ಮೂರು ಸಿಂಗಲ್ ಬ್ಯಾರೆಲ್ ರೈಫಲ್ಗಳು, ಒಂದು ದೇಶಿ ಡಬಲ್ ಬೋರ್ ಮತ್ತು ಒಂದು ಮೂತಿ ಲೋಡ್ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಫಾಲ್ ನಗರದಲ್ಲಿ, ಮೊಬೈಲ್ ಚೆಕ್ ಪೋಸ್ಟ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆಯಲಾಯಿತು. ಈ ವೇಳೆ ದುಷ್ಕರ್ಮಿಗಳು ಕಾರಿನಿಂದ ಕೆಳಗಿಳಿದು ಪರಾರಿಯಾಗಲು ಯತ್ನಿಸಿದರು. ಆದರೆ ಎಲ್ಲಾ ಮೂವರು ದುಷ್ಕರ್ಮಿಗಳನ್ನು ಬಂಧಿಸಿಸಲಾಗಿದೆ ಎಂದು ಅವರು ಹೇಳಿದ್ದಾರೆ.