ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಒಂದು ತಿಂಗಳ ಕಾಲ ಬಿಜೆಪಿಯ ಮಹಾ ಜನಸಂಪರ್ಕ ಅಭಿಯಾನ ಆರಂಭವಾಗಲಿದ್ದು, ಅಜ್ಮೇರ್‌ನಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಅಭಿಯಾನ ನಡೆಯಲಿದ್ದು, ಇಂದು ಅಜ್ಮೇರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಬಿಜೆಪಿ ಇತಿಹಾಸದಲ್ಲೇ ಇದು ಅತಿ ದೊಡ್ಡ ಕಾರ್ಯಕ್ರಮವಾಗಿರಲಿದ್ದು, ಒಟ್ಟು 288 ಬಿಜೆಪಿ ನಾಯಕರು ಹಾಗೂ 16 ಲಕ್ಷ ಕಾರ್ಯಕರ್ತರಿರುವ 10 ಲಕ್ಷ ಬೂತ್‌ಗಳಲ್ಲಿ ಸಂವಾದ ನಡೆಯಲಿದೆ.
ಜೂನ್ 30ರವರೆಗೆ ಒಂದು ತಿಂಗಳ ಕಾಲ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಮಹಾಜನ ಸಂಪರ್ಕ ಅಭಿಯಾನದಡಿ ಎಲ್ಲಾ ಜಿಲ್ಲೆಗಳು, ಮಂಡಲ, ಶಕ್ತಿ ಕೇಂದ್ರಗಳು, ಬೂತ್‌ಗಳು ಮತ್ತು ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ವಿಶೇಷ ಚಟುವಟಿಕೆಯೊಂದಿಗೆ ಜನರ ಬಳಿಗೆ ಹೋಗಲು ಬಿಜೆಪಿ ನಿರ್ಧರಿಸಿದೆ. ಅದರ ಭಾಗವಾಗಿ ಬಿಜೆಪಿ ಪಕ್ಷವು ದೇಶಾದ್ಯಂತ 51 ಬೃಹತ್ ಸಾರ್ವಜನಿಕ ಸಭೆಗಳನ್ನು ನಡೆಸಲು ನಿರ್ಧರಿಸಿದೆ. ಇದಲ್ಲದೆ, ಲೋಕಸಭೆ ಮಟ್ಟದಲ್ಲಿ ಒಟ್ಟು 396 ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಈ ಕಾರ್ಯಕ್ರಮವನ್ನು ದೇಶಾದ್ಯಂತ ಆಯೋಜಿಸಲು ಬಿಜೆಪಿ ನಿರ್ಧರಿಸಿದೆ. ಇದೇ ವೇಳೆ ದೇಶಾದ್ಯಂತ 51 ಸಾರ್ವಜನಿಕ ಸಭೆಗಳು ನಡೆಯಲಿವೆ. ಜನಸಂಪರ್ಕ ಅಭಿಯಾನದ ಸಿದ್ಧತೆಗಾಗಿ ಬಿಜೆಪಿ ಈಗಾಗಲೇ ಎಲ್ಲಾ ರಾಜ್ಯ, ಜಿಲ್ಲಾ ಮತ್ತು ಮಂಡಲ ಮಟ್ಟದ ಕಾರ್ಯಕಾರಿ ಗುಂಪು ಸಭೆಗಳನ್ನು ಆಯೋಜಿಸಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದೇಶಾದ್ಯಂತ 117 ಕ್ಲಸ್ಟರ್ ತಂಡಗಳನ್ನು ನೇಮಿಸಲಾಗಿದೆ. ಮೋದಿಯವರ ಒಂಬತ್ತು ವರ್ಷಗಳ ಆಡಳಿತದ ಸಾಧನೆಗಳನ್ನು ಜನರಿಗೆ ವಿವರಿಸಿ ಬಿಜೆಪಿಯತ್ತ ಸೆಳೆಯಲು ಈ ಚಟುವಟಿಕೆಯನ್ನು ರೂಪಿಸಲಾಗಿದೆ.