ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಭುಗಿಲೆದ್ದ ಘರ್ಷಣೆಯನ್ನು ನಿಯಂತ್ರಿಸಲು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಮುಂದಾಗಿದ್ದಾರೆ. ಕಳೆದ ಎರಡು ದಿನಗಳಿಂದ ವಿವಿಧ ಸಮುದಾಯ, ಪಂಗಡಗಳ ಮುಖಂಡರ ಜತೆ ಸಭೆ ನಡೆಸಲಾಗಿದೆ. ರಾಜ್ಯಕ್ಕೆ ಭೇಟಿ ನೀಡಿದ 3ನೇ ದಿನ ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಮೊರೆ ಪಟ್ಟಣಕ್ಕೆ ಅಮಿತ್ ಭೇಟಿ ನೀಡಿದ್ದಾರೆ. ಅಲ್ಲಿನ ಕುಕಿ ಸಮುದಾಯಗಳ ಮುಖಂಡರೊಂದಿಗೆ ವಿಶೇಷ ಸಭೆ ನಡೆಸಲಾಗುವುದು.
ಸೋಮವಾರ ತಡರಾತ್ರಿ ಇಂಫಾಲ್ಗೆ ಆಗಮಿಸಿದ ಅಮಿತ್ ಶಾ ಕೋಮುಗಲಭೆಯನ್ನು ಪರಿಹರಿಸಲು ವಿವಿಧ ಕುಕಿ ಮತ್ತು ಮೈತೆಯ್ ನಾಯಕರು, ಉನ್ನತ ಭದ್ರತಾ ಅಧಿಕಾರಿಗಳು ಮತ್ತು ಮಣಿಪುರ ಕ್ಯಾಬಿನೆಟ್ನೊಂದಿಗೆ ಸರಣಿ ಸಭೆಗಳನ್ನು ನಡೆಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಘರ್ಷಣೆಗಳಿಂದಾಗಿ ಮೊರೇನ್ ಪಟ್ಟಣವು ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಈ ಸಂದರ್ಭದಲ್ಲಿ ಅಮಿತ್ ಶಾ ಇಂದು ಮೊರೇನ್ ಗೆ ಭೇಟಿ ನೀಡಿದ್ದಾರೆ.
ಕುಕ್ಚಿಂಗ್ ಜಿಲ್ಲೆಯ ಸುಗ್ನು ಎಂಬಲ್ಲಿ ಬಂಡುಕೋರರು ಮತ್ತು ಭದ್ರತಾ ಪಡೆಗಳ ನಡುವೆ ನಿನ್ನೆ ರಾತ್ರಿ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಇಂಫಾಲ್ ಪೂರ್ವದ ಸಗೋಲ್ಮಾಂಗ್ನಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಕೆಲವು ನಾಗರಿಕರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ತಕ್ಷಣವೇ ಸಹಜ ಸ್ಥಿತಿಗೆ ಮರಳಬೇಕು ಗುರಿಯೊಂದಿಗೆ ಐದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುವುದು, ಪರಿಹಾರ ಪ್ರಯತ್ನಗಳನ್ನು ವೇಗಗೊಳಿಸುವುದು, ಹಿಂಸಾಚಾರದಲ್ಲಿ ಸತ್ತವರ ಕುಟುಂಬಗಳಿಗೆ ಪರಿಹಾರ ಮತ್ತು ವದಂತಿಗಳ ಹರಡುವಿಕೆಯನ್ನು ಎದುರಿಸಲು ಸಂವಹನ ಮಾರ್ಗಗಳನ್ನು ಪುನಃ ತೆರೆಯುವುದು ಸೇರಿವೆ.