Saturday, December 20, 2025

ಮೆಸ್ಸಿ ಕಾರ್ಯಕ್ರಮದಲ್ಲಿ ಫ್ಯಾನ್ಸ್ ದಾಂಧಲೆ: ಬಂಗಾಳ ಕ್ರೀಡಾ ಸಚಿವರ ತಲೆದಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಲಿಯೋನೆಲ್ ಮೆಸ್ಸಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಫ್ಯಾನ್ಸ್ ದಾಂಧಲೆ ಮತ್ತು ಅವ್ಯವಸ್ಥೆಗೆ ಸಂಬಂಧಿಸಿದಂತೆ ಟಿಎಂಸಿ ನೇತೃತ್ವದ ರಾಜ್ಯ ಸರ್ಕಾರದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರ ತಲೆದಂಡವಾಗಿದೆ.

ಅರೂಪ್ ಬಿಸ್ವಾಸ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬರೆದ “ರಾಜೀನಾಮೆ ಪತ್ರ”ವನ್ನು ಟಿಎಂಸಿ ವಕ್ತಾರ ಕುನಾಲ್ ಘೋಷ್ ಮಂಗಳವಾರ ಹಂಚಿಕೊಂಡಿದ್ದಾರೆ.

‘ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕ್ರೀಡಾ ಇಲಾಖೆಯ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಪತ್ರದಲ್ಲಿ ಬರೆದಿದ್ದಾರೆ’ ಎಂದು ಘೋಷ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 13, 2025 ರಂದು, ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ವಿವೇಕಾನಂದ ಯುವ ಭಾರತಿ ಕ್ರೀಡಾಂಗಡ(ಸಾಲ್ಟ್ ಲೇಕ್) ಆಗಮಿಸಿದಾಗ ಉಂಟಾದ ದಾಂಧಲೆ ಬಗ್ಗೆ ತನಿಖೆಗೆ ನೀವು ಈಗಾಗಲೇ ಸಮಿತಿಯನ್ನು ರಚಿಸಿದ್ದೀರಿ. ನಿಷ್ಪಕ್ಷಪಾತ ತನಿಖೆಗಾಗಿ, ನಾನು ಪಶ್ಚಿಮ ಬಂಗಾಳ ಕ್ರೀಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ನನ್ನ ವಿನಂತಿಯನ್ನು ಸ್ವೀಕರಿಸಬೇಕೆಂದು’ಎಂದು ಬಿಸ್ವಾಸ್ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ.

ಬಿಸ್ವಾಸ್ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಂಗೀಕರಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಮುಖ್ಯಮಂತ್ರಿ ಕಚೇರಿಯಿಂದ ತಕ್ಷಣ ಯಾವುದೇ ದೃಢೀಕರಣ ಬಂದಿಲ್ಲ.

error: Content is protected !!