ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಯಲ್ಲಿ ಮಕ್ಕಳು ಪಾಠ ಕೇಳುತ್ತಿರುವ ಸಂದರ್ಭದಲ್ಲೇ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ನಡೆದಿದೆ.
ಸಿರುಗುಪ್ಪ ಪಟ್ಟಣದ ಸುದೀಕ್ಷಾ ಇಂಟರ್ನ್ಯಾಷನಲ್ ಶಾಲೆಯಲ್ಲಿ, ವಿದ್ಯುತ್ ಪೂರೈಕೆ ಸ್ಥಗಿತವಾದ್ದರಿಂದ ಶಾಲೆಯ ಜನರೇಟರ್ ಆನ್ ಮಾಡಲಾಗಿತ್ತು. ಜನರೇಟರ್ ಕೊಠಡಿಯಲ್ಲಿನ ವಿದ್ಯುತ್ ವೈರ್ಗಳಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಜನರೇಟರ್ ಕೊಠಡಿ ಹೊತ್ತಿ ಉರಿಯುವಾಗಲೇ ಎಚ್ಚೆತ್ತ ಶಾಲಾ ಸಿಬ್ಬಂದಿ, ಶಾಲೆಯ ಒಳಗಿದ್ದ 150 ಮಕ್ಕಳನ್ನು ಹಿಂಬಾಗಿಲಿನಿಂದ ಹೊರಗಡೆ ಕಳಿಸಿ ರಕ್ಷಿಸಿದ್ದಾರೆ. ಶಾಲಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಬಳಿಕ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಕೂಡಲೇ ಬೆಂಕಿ ಹತೋಟಿಗೆ ಬಂದ ಹಿನ್ನೆಲೆ ಶಾಲಾ ಕಟ್ಟಡ ಹಾಗೂ ಪಕ್ಕದಲ್ಲಿಯೇ ಇದ್ದ ವಿಎಎಂ ಫುಡ್ ಬಜಾರ್ ಸೇಫ್ ಆಗಿದೆ. ಸಿರುಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.