ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಎಎಸ್ (IAS) ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಐಪಿಎಸ್ (IPS) ಅಧಿಕಾರಿ ರೂಪಾ ಮೌದ್ಗಿಲ್‌ಗೆ (Roopa Moudgil) ಜಾಮೀನು ದೊರಕಿದೆ.
ರೂಪಾ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ಈ ಕೃತ್ಯ ಎಸಗಿದ್ದಾರೆ ಎಂದು ರೋಹಿಣಿ ಸಿಂಧೂರಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇದಕ್ಕೆ ಪ್ರತಿಯಾಗಿ ತನ್ನ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಬೇಕು ಎಂದು ರೂಪಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ 24 ನೇ ಎಸಿಎಂಎಂ ಕೋರ್ಟ್ ಹಾಲ್‌ಗೆ ಇಂದು ಐಪಿಎಸ್ ಅಧಿಕಾರಿ ರೂಪಾ ಹಾಜರಾದರು. ಕೋರ್ಟ್‌ಗೆ ಹಾಜರಾಗಿ ರೂಪಾ ಜಾಮೀನು ಪಡೆದುಕೊಂಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ಜೂನ್ 22 ಕ್ಕೆ ಮುಂದೂಡಲಾಗಿದೆ.