ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂಗಳ ಪವಿತ್ರ ಕ್ಷೇತ್ರವಾದ ಅಮರನಾಥ ಯಾತ್ರೆಯನ್ನು ಪ್ರತಿಯೊಬ್ಬ ಹಿಂದೂಗಳು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಲು ಬಯಸುತ್ತಾರೆ. ಈ ವರ್ಷ ಜುಲೈ 1ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ವಿಧ್ವಂಸಕ ಕೃತ್ಯ ಎಸಗುವ ಭಯೋತ್ಪಾದಕರು ಈ ಪ್ರವಾಸವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆಯಿಂದ ಭಾರತೀಯ ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿದೆ.
ಭಯೋತ್ಪಾದಕರ ಬೆದರಿಕೆಯ ಬಗ್ಗೆ ಮಾಹಿತಿ ಬಂದ ನಂತರ ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿವೆ. ಅಮರನಾಥ ಯಾತ್ರೆಯ ಬೆಂಗಾವಲು ಪಡೆ ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎಂದು ಗುಪ್ತಚರ ಮೂಲಗಳು ಮಾಹಿತಿ ಪಡೆದಿವೆ ಎಂದು ವರದಿಗಳಿವೆ. ಈ ಉದ್ದೇಶಕ್ಕಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಕಾಶ್ಮೀರಿ ಯುವಕರಿಗೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಜವಾಬ್ದಾರಿಯನ್ನು ವಹಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಾಶ್ಮೀರಿ ಯುವಕರು ಸ್ಥಳೀಯರಾಗಿದ್ದು, ಅವರಿಗೆ ಒಳನುಸುಳುವಿಕೆಯ ಎಲ್ಲಾ ಮಾರ್ಗಗಳು ತಿಳಿದಿವೆ ಎಂಬ ಮಾಹಿತಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗೆ ಹೋಗಿದೆಯಂತೆ. ರಜೌರಿ-ಪೂಂಚ್, ಪಿರ್ ಪಂಜಾಲ್, ಚೆನಾಬ್ ಕಣಿವೆ ಮತ್ತು ಇತರ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿಯ ಸಾಧ್ಯತೆಯಿದೆ ಎಂದು ಭದ್ರತಾ ಸಿಬ್ಬಂದಿ ಶಂಕಿಸಿದ್ದಾರೆ.
ದಾಳಿಯ ಹೊಣೆ ಹೊತ್ತಿರುವ ಇಬ್ಬರು ಯುವಕರನ್ನು ಭದ್ರತಾ ಸಂಸ್ಥೆಗಳು ಹುಡುಕುತ್ತಿವೆ. ಅವರ ಮನೆ, ಕುಟುಂಬ ಸದಸ್ಯರ ಮೇಲೆ ನಿಗಾ ಇರಿಸಲಾಗಿದ್ದು, ಅಮರನಾಥ ಯಾತ್ರೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸ್ಕ್ವಾಡ್ ತಂಡಗಳು, ಕ್ಯೂಆರ್‌ಟಿ, ಸಿಆರ್‌ಪಿಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಎಸ್‌ಎಸ್‌ಬಿ ಮತ್ತು ಭದ್ರತಾ ಏಜೆನ್ಸಿಗಳು ಯಾತ್ರಾರ್ಥಿಗಳ ಭದ್ರತೆಯನ್ನು ಹೆಚ್ಚಿಸಿವೆ.