ಜಾನಿ ವಾಕರ್ ರೂವಾರಿ, ಡಿಯಾಜೀಯೋದ ಸಿಇಒ ಭಾರತ ಸಂಜಾತ ಇವಾನ್ ಮೆನಜೆಸ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವ ಲಿಕ್ಕರ್ ಮಾರುಕಟ್ಟೆಯಲ್ಲಿ ಡಿಯಾಜೀಯೋ ಸಂಸ್ಥೆಯನ್ನು ಉನ್ನತಕ್ಕೇರಿಸಿದ ಇವಾನ್ ಮ್ಯಾನುಯಲ್ ಮೆನೆಜಸ್ (Ivan Manuel Menezes) ನಿಧನರಾಗಿದ್ದಾರೆ.

ಡಿಯಾಜೀಯೋದ (Diageo) ಸಿಇಒ ಆಗಿದ್ದ ಇವಾನ್ ಅವರು ಅಲ್ಸರ್ ಕಾಯಿಲೆಯಿಂದ (Stomach Ulcer) ಬಳಲುತ್ತಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನಗೊಂಡಿರುವುದು ತಿಳಿದುಬಂದಿದೆ.

63 ವರ್ಷ ವಯಸ್ಸಾಗಿದ್ದ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕೆಲ ವರ್ಷಗಳಿಂದ ಅವರಿಗೆ ಹೊಟ್ಟೆಯಲ್ಲಿ ಅಲ್ಸರ್ ಬಾಧಿಸುತ್ತಿತ್ತು ಲಂಡನ್​ನ ಆಸ್ಪತ್ರೆಯಲ್ಲಿ ಅವರಿಗೆ ಹೊಟ್ಟೆಯಲ್ಲಿ ಅಲ್ಸರ್ ತೆಗೆಯಲು ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದು ಫಲಕಾರಿಯಾಗಲಿಲ್ಲ ಎನ್ನಲಾಗಿದೆ.

ಇವಾನ್ ಮ್ಯಾನುಯಲ್ ಮೆನೆಜಸ್ 1959 ಜುಲೈ 10ರಂದು ಪುಣೆಯಲ್ಲಿ ಜನಿಸಿದ್ದರು. ಅವರ ತಂದೆ ಮ್ಯಾನುಯಲ್ ಮೆನೆಜಸ್ ಅವರು ಭಾರತೀಯ ರೈಲ್ವೆ ಮಂಡಳಿಯ ಛೇರ್ಮನ್ ಆಗಿದ್ದರು. ದೆಹಲಿಯಲ್ಲಿ ಪದವಿ ಓದಿದ ಇವಾನ್, ಅಹ್ಮದಾಬಾದ್​ನ ಐಐಎಂನಲ್ಲಿ ಎಂಬಿಎ ಪಡೆದರು. ಬಳಿಕ ಬ್ರಿಟನ್​ನಲ್ಲಿ ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್​ನಲ್ಲಿ ಉನ್ನತ ಶಿಕ್ಷಣ ಪಡೆದರು.

ಇವಾನ್ ಮೆನೆಜಸ್ ಅವರ ಸಹೋದರ ವಿಕ್ಟರ್ ಮೆನೆಜಸ್ ಅವರು ಸಿಟಿಬ್ಯಾಂಕ್​ನ ಛೇರ್ಮನ್ ಆಗಿದ್ದರು. ಇವಾನ್ ಅವರು ಬ್ರಿಟನ್ ಮತ್ತು ಅಮೆರಿಕದ ಪೌರತ್ವ ಹೊಂದಿದ್ದಾರೆ. ಭಾರತದ ಓಐಸಿ ಕಾರ್ಡ್ ಹೊಂದಿದ್ದಾರೆ. ತಮ್ಮ ಕಾಲೇಜು ಕಾಲದ ಗೆಳತಿಯಾಗಿದ್ದ ಶಿಬಾನಿ ಅವರನ್ನು ವಿವಾಹವಾಗಿರುವ ಇವಾನ್ ಅವರಿಗೆ ನಿಖಿಲ್ ಮತ್ತು ರೋಹಿಣಿ ಎಂಬಿಬ್ಬರು ಮಕ್ಕಳಿದ್ದಾರೆ.

ಜಾನಿ ವಾಕರ್ ಮೊದಲಾದ ಬಲಿಷ್ಠ ಬ್ರ್ಯಾಂಡ್ ಬೆಳೆಸಿದ ಇವಾನ್
ಇವಾನ್ ಮ್ಯಾನುಯಲ್ ಮೆನೆಜೆಸ್ ಅವರು 1997ರಲ್ಲಿ ಡಿಯಾಜೀಯೋ ಕಂಪನಿ ಸೇರಿದರು. 2013ರಲ್ಲೇ ಸಿಇಒ ಪದವಿ ಗಿಟ್ಟಿಸಿದರು. ಇವರ ನಾಯಕತ್ವದಲ್ಲಿ ಡಿಯಾಜೀಯೋ ವಿಶ್ವ ಮದ್ಯ ಮಾರುಕಟ್ಟೆಯಲ್ಲಿ ಭಾರೀ ವಿಸ್ತರಣೆ ಪಡೆಯಿತು. ಲಿಕ್ಕರ್ ಪ್ರಿಯರಿಗೆ ಜಾನಿ ವಾಕರ್ ಹೆಸರು ಕೆಳದೇ ಇದ್ದೀತಾ. ಡಿಯಾಜೀಯೋ ತಯಾರಿಸುವ ಜಾನಿ ವಾಕರ್ ಬ್ರ್ಯಾಂಡ್ ಅನ್ನು ಕಟ್ಟಿ ವಿಶ್ವಖ್ಯಾತವಾಗಿದ್ದು ಇವರಿಂದಲೇ.

ಜಾನಿ ವಾಕರ್ ವಿಸ್ಕಿಯಲ್ಲದೇ ಇತರ ವಿಶ್ವಖ್ಯಾತ ಬ್ರ್ಯಾಂಡ್​ಗಳಾದ ಟ್ಯಾಂಕ್ಯುರೇ ಜಿನ್, ಡಾನ್ ಜೂಲಿಯೋ ಟೆಕಿಲಾ ಕೂಡ ಡಿಯಾಜಿಯೋದ್ದೇ ಆಗಿವೆ. ಸ್ಕಾಚ್ ವಿಸ್ಕಿ, ವೋಡ್ಕಾ, ಜಿನ್, ಕೆನಡಿಯ್ ವಿಸ್ಕಿ, ಟೆಕಿಸಾ ಇತ್ಯಾದಿ ಮದ್ಯಪಾನೀಯಗಳಲ್ಲಿ ಡಿಯಾಜೀಯೋದ ಜನಪ್ರಿಯ ಬ್ರ್ಯಾಂಡ್​ಗಳಿವೆ. 180ಕ್ಕೂ ಹೆಚ್ಚು ದೇಶಗಳಲ್ಲಿ ಡಿಯಾಜಿಯೋದ 200ಕ್ಕೂ ಹೆಚ್ಚು ಬ್ರ್ಯಾಂಡ್ ಮದ್ಯ ಉತ್ಪನ್ನಗಳು ಮಾರಾಟವಾಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!