ಹೊಸದಿಗಂತ ಡಿಜಿಟಲ್ ಡೆಸ್ಕ್:
ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕಿ (News Anchor) ಗೀತಾಂಜಲಿ ಅಯ್ಯರ್ ಬುಧವಾರ ನಿಧನ ಹೊಂದಿದ್ದಾರೆ.
ದೂರದರ್ಶನದಲ್ಲಿ ವಾರ್ತೆಗಳನ್ನು ಓದುವ ಮೂಲಕ ದೇಶದ ಮನೆಮನೆಗಳಿಗೆ ಪರಿಚಿತರಾಗಿದ್ದ ಅವರು ನಿಧನ ಹೊಂದಿರುವ ವಾರ್ತೆಯನ್ನು ಅವರ ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.
ದೂರದರ್ಶನದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ನಂತರದಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಗೀತಾಂಜಲಿ ಅವರು 1971ರಲ್ಲಿ ದೂರದರ್ಶನಕ್ಕೆ ಸೇರಿದ್ದರು. ನಿರೂಪಕಿಯಾಗಿ ಮಾಡಿದ ಅಪ್ರತಿಮ ಸಾಧನೆಗಾಗಿ ಅವರು ನಾಲ್ಕು ಬಾರಿ ಅತ್ಯುತ್ತಮ ನಿರೂಪಕಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕೊಲ್ಕತ್ತಾದ ಲೊರೆಟೊ ಕಾಲೇಜಿನಿಂದ ಪದವಿ ಪಡೆದಿದ್ದ ಗೀತಾಂಜಲಿ ಅಯ್ಯರ್, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ಡಿಪ್ಲೊಮಾ ಪಡೆದಿದ್ದಾರೆ. 1989ರಲ್ಲಿ ಅತ್ಯುತ್ತಮ ಮಹಿಳೆಯರಿಗಾಗಿ ನೀಡುವ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಆಲ್ ಇಂಡಿಯಾ ರೇಡಿಯೋದಲ್ಲಿ ಶುಕ್ರವಾರ ರಾತ್ರಿ ಇಂಗ್ಲಿಷ್ ಹಾಡಿನ ಕೋರಿಕೆಯ ಜನಪ್ರಿಯ ಕಾರ್ಯಕ್ರಮ ಎ ಡೇಟ್ ವಿತ್ ಯು ಕಾರ್ಯಕ್ರವನ್ನು ಅವರು ಪ್ರಸ್ತುತಪಡಿಸುತ್ತಿದ್ದರು. ಸುದ್ದಿ ಉದ್ಯಮದಲ್ಲಿ ದಶಕಗಳ ವೃತ್ತಿಜೀವನವನ್ನು ಹೊಂದಿದ್ದ ನಂತರ ಅವರು ಕಾರ್ಪೊರೇಟ್ ಸಂವಹನ, ಸರ್ಕಾರಿ ಸಂಪರ್ಕ ಮತ್ತು ಮಾರ್ಕೆಟಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಅವರು ಭಾರತದ ವರ್ಲ್ಡ್ ವೈಡ್ ಫಂಡ್ ಸಂಸ್ಥೆಯ ಪ್ರಮುಖ ದಾನಿಗಳಲ್ಲಿ ಒಬ್ಬರಾಗಿದ್ದರು.