ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಪೊಲೀಸರು ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ. ಈ ಸಂದರ್ಭದಲ್ಲಿ 57 ಶಸ್ತ್ರಾಸ್ತ್ರಗಳು ಮತ್ತು 323 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಸನ್ನದ್ಧವಾಗಿವೆ ಎಂದು ರಾಜ್ಯ ಸರ್ಕಾರದ ಭದ್ರತಾ ಸಲಹೆಗಾರ ತಿಳಿಸಿದ್ದಾರೆ.
ಕೂಂಬಿಂಗ್ ನಡೆಯುತ್ತಿದ್ದು, ಈ ಸಮಯದಲ್ಲಿ ಶಸ್ತ್ರಾಸ್ತ್ರಗಳನ್ನುಹಿಂದಿರುಗಿಸುವಂತೆ ಜನರನ್ನು ಕೇಳಲಾಗುತ್ತದೆ. ಇದುವರೆಗೆ 868 ಆಯುಧಗಳು, 11,518 ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಕ್ರಮೇಣ ಪರಿಸ್ಥಿತಿ ಸಾಮಾನ್ಯವಾಗುತ್ತಿದೆ. ಶೀಘ್ರದಲ್ಲೇ ಜನರು ತಮ್ಮ ಮನೆಗಳಿಗೆ ಮರಳುತ್ತಾರೆ. ಕಣಿವೆಯ 5 ಜಿಲ್ಲೆಗಳಲ್ಲಿ 12 ಗಂಟೆಗಳ ಕಾಲ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ 8 ರಿಂದ 10 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿದೆ.
ಅಮಿತ್ ಶಾ ಭೇಟಿಯ ನಂತರ ಮಣಿಪುರದಲ್ಲಿ ಶಾಂತಿಯುತ ವಾತಾವರಣ ನೆಲೆಸಿದೆ. ಜನರು ಶಾಂತವಾಗಿರುವಂತೆ ಎರಡೂ ಕಡೆಯವರಲ್ಲಿ ಮನವಿ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 37ರಲ್ಲಿ ಅಗತ್ಯ ಸರಕು ಸಾಗಣೆ ವಾಹನಗಳ ಸಂಚಾರ ಆರಂಭವಾಗಿದೆ. ಅಂಗಡಿಗಳು ತೆರೆಯುತ್ತಿವೆ. ಪೆಟ್ರೋಲ್ ಪಂಪ್ಗಳೂ ತೆರೆಯುತ್ತಿವೆ. ಆದರೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.