ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧಾರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಧುರಂಧರ್’ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಡಿಸೆಂಬರ್ 5 ರಂದು ತೆರೆಕಂಡ ಈ ಸಿನಿಮಾ ಕೇವಲ ಕೆಲವೇ ದಿನಗಳಲ್ಲಿ 411 ಕೋಟಿ ರೂಪಾಯಿ ಗಳಿಸುವ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದಿದೆ. ಅಕ್ಷಯ್ ಖನ್ನಾ, ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಅವರಂತಹ ದಿಗ್ಗಜ ತಾರಾಗಣವಿರುವ ಈ ಸಿನಿಮಾ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ.
ಇತ್ತೀಚೆಗೆ ಚಿತ್ರಮಂದಿರಕ್ಕೆ ಭೇಟಿ ನೀಡಿ ಸಿನಿಮಾ ವೀಕ್ಷಿಸಿದ ನಟಿ ಶ್ರದ್ಧಾ ಕಪೂರ್, ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಗುಣಗಾನ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸತತ ಮೂರು ಪೋಸ್ಟ್‌ಗಳನ್ನು ಹಾಕಿರುವ ಅವರು, “ಸಿನಿಮಾ ಅದ್ಭುತವಾಗಿದೆ, ನಾನು ಎರಡನೇ ಬಾರಿಗೆ ನೋಡಲು ರೆಡಿಯಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರದ ಬಗ್ಗೆ ಟೀಕೆ ಮಾಡುವವರಿಗೆ ತಮ್ಮ ಪೋಸ್ಟ್ ಮೂಲಕವೇ ತಿರುಗೇಟು ನೀಡಿದ್ದಾರೆ.
ಚಿತ್ರದ ಎರಡನೇ ಭಾಗದ ಬಗ್ಗೆ ಶ್ರದ್ಧಾ ವಿಶೇಷ ಮನವಿ ಮಾಡಿದ್ದಾರೆ. “ಎರಡನೇ ಭಾಗಕ್ಕಾಗಿ ನಮ್ಮನ್ನು 3 ತಿಂಗಳು ಕಾಯುವಂತೆ ಮಾಡಬೇಡಿ, ದಯವಿಟ್ಟು ಬೇಗ ಬಿಡುಗಡೆ ಮಾಡಿ. ನಮ್ಮ ಭಾವನೆಗಳ ಜೊತೆ ಆಟವಾಡಬೇಡಿ” ಎಂದು ತಮಾಷೆಯಾಗಿ ಚಿತ್ರತಂಡಕ್ಕೆ ಕೋರಿದ್ದಾರೆ. ಶೂಟಿಂಗ್ ಇಲ್ಲದಿದ್ದರೆ ತಾನು ಈಗಲೇ ಮತ್ತೊಮ್ಮೆ ಸಿನಿಮಾ ನೋಡುತ್ತಿದ್ದೆ ಎಂದು ಅವರು ಹೇಳಿದ್ದಾರೆ. 2025ರ ಸಾಲಿನಲ್ಲಿ ‘ಛಾವಾ’, ‘ಸೈಯಾರಾ’ ಜೊತೆಗೆ ‘ಧುರಂಧರ್’ ಹಿಂದಿ ಸಿನಿಮಾವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿದೆ ಎಂದು ಅವರು ಶ್ಲಾಘಿಸಿದ್ದಾರೆ.
‘ಧುರಂಧರ್’ ಚಿತ್ರದ ಎರಡನೇ ಭಾಗವು ಮಾರ್ಚ್ 19 ರಂದು ತೆರೆಗೆ ಬರಲು ಸಜ್ಜಾಗಿದೆ. ಮೊದಲ ಭಾಗವೇ 400 ಕೋಟಿ ದಾಟಿರುವುದರಿಂದ, ಎರಡನೇ ಭಾಗದ ಮೇಲೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿದೆ.

