ರಾಮಚಂದ್ರನ್‌ ವಿಶ್ವನಾಥನ್‌ ದೇಶಭ್ರಷ್ಟ ಆರ್ಥಿಕ ಅಪರಾಧಿ: ಸಿಬಿಐ ಸ್ಪೆಷಲ್ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಯಂಟ್ರಿಕ್ಸ್‌-ದೇವಾಸ್‌ ಒಪ್ಪಂದದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ದೇವಾಸ್‌ ಮಲ್ಟಿಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಸಿಇಒ ರಾಮಚಂದ್ರನ್‌ ವಿಶ್ವನಾಥನ್‌ ಅವರನ್ನು (Antrix-Devas Case) ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ.

ಆಯಂಟ್ರಿಕ್ಸ್‌-ದೇವಾಸ್‌ ಒಪ್ಪಂದದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ 2018ರಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ಪ್ರಕರಣದಲ್ಲಿ ದೇವಾಸ್‌ ಸಿಇಒ ರಾಮಚಂದ್ರನ್‌ ವಿಶ್ವನಾಥನ್‌ ಹಾಗೂ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸದ್ಯ ವಿದೇಶದಲ್ಲಿರುವ ರಾಮಚಂದ್ರನ್ ವಿಶ್ವನಾಥನ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿ, ವಿಚಾರಣೆಯನ್ನು ಜೂನ್‌ 26ಕ್ಕೆ ಮುಂದೂಡಿದೆ.

ಏನಿದು ಪ್ರಕರಣ?
2004ರಲ್ಲಿ ಬೆಂಗಳೂರಿನಲ್ಲಿ ಉಪಗ್ರಹ ಆಧಾರಿತ ಮಲ್ಟಿಮೀಡಿಯಾ ಸೇವೆಗಳನ್ನು ನೀಡುವ ಉದ್ದೇಶದಿಂದ ವಿಶ್ವನಾಥನ್‌ ಅವರು ದೇವಾಸ್‌ ಮಲ್ಟಿಮೀಡಿಯಾ ಪ್ರೈ. ಲಿ ಎಂಬ ಕಂಪೆನಿ ಆರಂಭಿಸಿದ್ದರು. ಒಂದು ವರ್ಷದ ಬಳಿಕ ದೇವಾಸ್‌ ಸಂಸ್ಥೆಯು ಇಸ್ರೋದ ವಾಣಿಜ್ಯ ವಿಭಾಗ ಆಂಟ್ರಿಕ್ಸ್‌ ಕಾರ್ಪೊರೇಶನ್‌ ಜತೆ ಒಪ್ಪಂದ ಮಾಡಿಕೊಂಡಿತ್ತು. ಆಯಂಟ್ರಿಕ್ಸ್‌ ಎರಡು ಉಪಗ್ರಹಗಳನ್ನು ನಿರ್ಮಿಸಬೇಕಿತ್ತು. ಅದೇ ರೀತಿ ದೇವಾಸ್‌ ಎಸ್-ಬ್ಯಾಂಡ್‌ ಟ್ರಾನ್ಸ್‌ಪಾಂಡರ್ಸ್ ಸಂಹವನ ಉಪಗ್ರಹದ ಮೂಲಕ ಭಾರತೀಯ ಮೊಬೈಲ್‌ ಬಳಕೆದಾರರಿಗೆ ಮಲ್ಟಿಮೀಡಿಯಾ ಸೇವೆ ನೀಡಬೇಕಿತ್ತು. ನಂತರ ಆಯಂಟ್ರಿಕ್ಸ್‌ -ದೇವಾಸ್‌ ಒಡಂಬಡಿಕೆಯಲ್ಲಿ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿತ್ತು.ಅಕ್ರಮವಾಗಿ 578 ಕೋಟಿ ರೂಪಾಯಿಗಳನ್ನು ಖಾಸಗಿ ಮಲ್ಟಿಮೀಡಿಯಾ ಕಂಪೆನಿ ದೇವಾಸ್‌ ಲಾಭ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಪ್ರಕರಣವು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!