ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಬಿಸಿಲಿನ ತಾಪಮಾನ ಅಧಿಕವಾದ ಪರಿಣಾಮ ಮೊಟ್ಟೆ ದರದಲ್ಲಿ ಏರಿಕೆಯಾಗಿದೆ.
ತಾಪಮಾನ ಅಧಿಕವಾದ ಕಾರಣ ಕೋಳಿಗಳು ಹೆಚ್ಚಿನ ಪ್ರಮಾಣದಲ್ಲಿ ಸಾಯುತ್ತಿವೆ. ಬಿಸಿ ಗಾಳಿ ಕಾರಣದಿಂದ ಕೋಳಿಗಳಿಗೆ ರೋಗ ಬಾಧೆ ಹೆಚ್ಚಾಗಿದೆ. ಇದರ ಪರಿಣಾಮ ಮೊಟ್ಟೆ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಮೊಟ್ಟೆಯ ದರ ಹೆಚ್ಚಳವಾಗಿದೆ.
ಬೇಸಿಗೆಯಲ್ಲಿ ಕೋಳಿಗಳು ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುತ್ತವೆ. ಹೆಚ್ಚಾಗಿ ನೀರು ಕುಡಿಯುವುದರಿಂದ ಮೊಟ್ಟೆ ಇಡುವ ಪ್ರಮಾಣ ಕಡಿಮೆಯಾಗಿರುತ್ತದೆ. ಹೀಗಾಗಿ ಮೊಟ್ಟೆ ಉತ್ಪಾದನೆ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಮೊಟ್ಟೆ ದರವು 50 ರಿಂದ 60 ಪೈಸೆ ಹೆಚ್ಚಾಗಿದೆ.
ಉತ್ಪಾದನೆ ಇಳಿಕೆ ಹಾಗೂ ಸಾರಿಗೆ ವೆಚ್ಚ ದುಬಾರಿಯಾದ ಪರಿಣಾಮ ಸಗಟು ದರದಲ್ಲಿ ಒಂದು ಮೊಟ್ಟೆ ಬೆಲೆ 5.65 ರೂ. ಇದ್ದು, ಚಿಲ್ಲರೆ ಮಾರಾಟಗಾರರು ಒಂದು ಮೊಟ್ಟೆಯನ್ನು 6.50 ರೂ.ನಂತೆ ಮಾರುತ್ತಿದ್ದಾರೆ.